ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ಬೆಂಗಳೂರು, ಜೂ. 26: ತಜ್ಞರು ಹಾಗೂ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯ ಪ್ರಕಾರ, ವೈಜ್ಞಾನಿಕ ಮೌಲ್ಯಮಾಪನದ ಬಳಿಕ ಪರಿಣಾಮಕಾರಿ ಸಾಗಣೆ ಸಾಮರ್ಥ್ಯದ (Carrying Capacity) ಆಧಾರದ ಮೇಲೆ ತಾಂತ್ರಿಕ ಸಮಿತಿಯ ವರದಿಯನ್ನು ಸರ್ಕಾರ ಅಂಗೀಕರಿಸಿದೆ.
ಸಮಿತಿಯು ಜಂಗಲ್ ಸಫಾರಿಯನ್ನು ನಿಯಂತ್ರಿತ ರೀತಿಯಲ್ಲಿ ನಡೆಸುವಂತೆ ಶಿಫಾರಸು ಮಾಡಿದ್ದು, ಪರಿಸರ ಸಮತೋಲನಕ್ಕೆ ಧಕ್ಕೆಯಾಗದಂತೆ ಉದ್ಯಾನ ಪ್ರವಾಸವನ್ನು ಪುನರಾರಂಭಿಸಲು ಹಸಿರು ನಿಶಾನೆ ನೀಡಲಾಗಿದೆ.
ಕರ್ನಾಟಕವು ಪರಿಸರ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯ ಹೊಂದಿದ್ದು, ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ನಿರಂತರವಾಗಿ ಅನುಸರಿಸುತ್ತಿದೆ ಎಂದು ಸರ್ಕಾರ ತಿಳಿಸಿದೆ. ಜಂಗಲ್ ಸಫಾರಿ ಪುನರಾರಂಭದಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳು ಹೆಚ್ಚುವ ಜೊತೆಗೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ ಎಂದು ಹೇಳಿದೆ.
ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವುದರೊಂದಿಗೆ ವನ್ಯಜೀವಿ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವ ಜವಾಬ್ದಾರಿಯುತ ಪರಿಸರ ಪ್ರವಾಸೋದ್ಯಮಕ್ಕೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.