ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಡಿ. 5 ರಂದು ಕರ್ನಾಟಕ ಬಂದ್ಗೆ ಕರೆ
ಬೆಂಗಳೂರು:
ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಡಿ. 5 ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ವಿಶೇಷ ಸೂಚನೆ ನೀಡಿದ್ದಾರೆ.
ಡಿ. 4 ರ ಮಧ್ಯರಾತ್ರಿಯಿಂದಲೇ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳುವಂತೆ ಸೂಚಿಸಿದ್ದು, ಡಿ. 5ರ ಬೆಳಗ್ಗೆ 4:30ರಿಂದ ಹೊಯ್ಸಳ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಇನ್ನು, ವಿಶೇಷವಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದೆ
ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಅಥವಾ ಟೌನ್ ಹಾಲ್ ಬಳಿಯಿಂದ ಮೈಸೂರು ಬ್ಯಾಂಕ್ ವೃತ್ತ ಮೂಲಕ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ನಡೆಸಲಾಗುತ್ತಿರುವುದರಿಂದ ಮುಂಚಿತವಾಗಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು.
ಸಮಾಜಘಾತುಕ ಕೃತ್ಯಕ್ಕೆ ಕೈ ಹಾಕುವವರನ್ನು ವಶಕ್ಕೆ ಪಡೆಯಬೇಕು. ಮುಷ್ಕರ ತಿಳಿಯಾಗುವವರೆಗೂ ಗರಿಷ್ಠ ಪೊಲೀಸ್ ನಿಯೋಜನೆ ಕಡ್ಡಾಯ, ಅಧಿಕಾರಿಗಳು ಹೆಲ್ಮೆಟ್, ರಿವಾಲ್ವರ್, ವಾಕಿಟಾಕಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಭದ್ರತಾ ಮೇಲ್ವಿಚಾರಣೆಯನ್ನು ಡಿಸಿಪಿಗಳು ನಿರ್ವಹಿತಕ್ಕದ್ದು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಭದ್ರತಾ ಕ್ರಮ ಕೈಗೊಳ್ಳಬೇಕು. ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯಮಂತ್ರಿ, ಸಚಿವರ ನಿವಾಸಗಳ ಬಳಿ ಹೆಚ್ಚಿನ ಭದ್ರತೆ ಹಾಕಬೇಕು. ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಬೇಕು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.