ಮಂಗಳೂರು/ಮಣಿಪಾಲ:
ಮತಾಂತರ ನಿಷೇಧ ಮತ್ತು ಲವ್ ಜಿಹಾದ್ ವಿರುದ್ಧ ಶೀಘ್ರವೇ ಕಾನೂನು ಜಾರಿ ಮಾಡುವುದು ನಿಶ್ಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲಹಾಬಾದ್ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ, ಹರಿಯಾಣದಲ್ಲಿ ಕಾನೂನು ಅಧ್ಯಯನ ಮಾಡಿ ಇನ್ನಷ್ಟು ಅಂಶಗಳನ್ನು ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಲವ್ ಜಿಹಾದ್ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ಸರಿಯಲ್ಲ. ಅವರು ಇನ್ನೂ ಮೊಘಲರ ಕಾಲದಲ್ಲಿದ್ದಾರೆ ಎಂದ ಅವರು, ಶಾಸಕ ವರ್ತೂರು ಪ್ರಕಾಶ್ ಅಪಹರಣದ ಸಮಗ್ರ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದರು.
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಡಿ. 5 ರಂದು ಬಂದ್ ನಡೆಸುವುದು ಸುಪ್ರೀಂ ಆದೇಶದ ಉಲ್ಲಂಘನೆಯಾಗಲಿದೆ. ಹೀಗಾಗಿ ಬಂದ್ ಹಿಂಪಡೆಯಲು ಮನವಿ ಮಾಡಿದ್ದೇವೆ. ಆದಾಗ್ಯೂ ಬಂದ್ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಇಂದು ಉಡುಪಿ ಜಿಲ್ಲಾಡಳಿತದಿಂದ ನಡೆದ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಶಾಸಕರಾದ ಶ್ರೀ ರಘುಪತಿ ಭಟ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.#KanakaJayanti pic.twitter.com/lLV4PpQR8Z
— Basavaraj S Bommai (@BSBommai) December 3, 2020
ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉನ್ನತ ಸಮಿತಿ ನೀಡಿದ ವರದಿ ಆಧಾರದಲ್ಲಿ ರಾತ್ರಿ ಕಪ್ರ್ಯೂ ಹೊರತಾಗಿ ಅನ್ಯ ಅಂಶಗಳ ಜಾರಿಗೆ ತೀರ್ಮಾನ ಕೈಗೊಳ್ಳಲಾಗುವುದು. ಕೋವಿಡ್ ನಿಯಂತ್ರಣದತ್ತ ಗಮನ ಹರಿಸಲಾಗುವುದು. ಹೊಸ ವರ್ಷದ ನಂತರ ಶಾಲೆಗಳ ಆರಂಭ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಈ ನಡುವೆ ಶಿಕ್ಷಣ ಸಚಿವರು ನಿರಂತರ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಎಂದರು.
ಸಂಪುಟ ವಿಸ್ತರಣೆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಬಿಜೆಪಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಮೂಲ, ವಲಸಿಗ ಎನ್ನುವ ತಿಕ್ಕಾಟ, ಗೊಂದಲವಿಲ್ಲ. ಜಿಲ್ಲಾಡಳಿತದಿಂದ ಗೌರವ ವಂದನೆ ಸಲ್ಲಿಸಲಾಯಿತು ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ, ಎಸ್ಪಿ ಎನ್.ವಿಷ್ಣುವರ್ಧನ, ಜಿ.ಪಂ.ಸಿಇಒ ಡಾ.ನವೀನ್ ಭಟ್ ಉಪಸ್ಥಿತರಿದ್ದರು.
ನಂತರ ಮಂಗಳೂರಿನಲ್ಲಿ ಮಂಗಳೂರು ಉತ್ತರ ಉಪವಿಭಾಗದ ಪಣಂಬೂರಿನಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಗೃಹಗಳ ಸಂಕಿಣ೯ ಉದ್ಘಾಟಿಸಿದರು.
ಬಳಿಕ ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಮಂಗಳೂರಿನಲ್ಲಿ ಲಷ್ಕರ್ ಎ ತೋಯ್ಬಾ ಪರ ಗೋಡೆ ಬರಹ ಪ್ರಕರಣದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಚರ್ಚೆ ನಡೆಯುತ್ತಿದೆ. ಹೆಚ್ಚೆಚ್ಚು ಗಲಭೆ, ಉಗ್ರರ ಕೃತ್ಯಗಳು ನಡೆಯುವ ಪ್ರದೇಶಗಳಲ್ಲಿ ಈ ರೀತಿ ಗೋಡೆ ಬರಹ ಬರೆಯಲಾಗುತ್ತಿದೆ. ಕಾಶ್ಮೀರ, ಇರಾಕ್, ಇರಾನ್ ನಲ್ಲೂ ಈ ರೀತಿ ಗೋಡೆ ಬರಹ ಬರೆಯಲಾಗಿತ್ತು. ಉಗ್ರರು ತಮ್ಮ ಕೃತ್ಯ ಮಾಡುವ ಮೊದಲು ಈ ರೀತಿ ಬರೆಯುತ್ತಾರೆ. ಇದೇ ರೀತಿಯ ಸಣ್ಣ ಪ್ರಯತ್ನ ಮಂಗಳೂರಿನಲ್ಲಿ ನಡೆದಿದೆ ಎಂದರು.
ಈಗಾಗಲೇ ಈ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ಮಾಡುತ್ತಿದ್ದು, ಅತೀ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು.