ಬೆಂಗಳೂರು:
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಕೆಜಿ ಹಳ್ಳಿ, ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ಗಲಭೆ ನಡೆದ ಬಳಿಕ ಕೇವಲ ಒಂದು ಬಾರಿ ಮಾತ್ರ ವಿಚಾರಣೆಗೆ ಹಾಜರಾಗಿದ್ದ ಜಾಕೀರ್ ಅವರು ನಂತರ ತಲೆಮರೆಸಿಕೊಂಡಿದ್ದರು. ಬುಧವಾರ ರಾತ್ರಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಆರ್.ಸಂಪತ್ ರಾಜ್ ಹಾಗೂ ಜಾಕೀರ್ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರ ನಾಪತ್ತೆಯಾಗಿದ್ದ ಸಂಪತ್‌ರಾಜ್ ಅವರನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಮಾಜಿ ಕಾರ್ಪೋರೇಟರ್ ಜಾಕೀರ್ ಸಿಸಿಬಿ ಪೊಲೀಸರನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಅಖಂಡ್ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿಸಿದ ಪ್ರಕರಣದಲ್ಲಿ ಸಂಪತ್‌ರಾಜ್, ಜಾಕೀರ್ ಸೇರಿ ಹಲವರ ಕೈವಾಡವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.