ಶಾಲೆ-ಕಾಲೇಜುಗಳ ಸುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟಕ್ಕೆ ನಿಷೇಧ: ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ
ಬೆಂಗಳೂರು: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್ಡಿಎ) ಶಾಲೆ, ಕಾಲೇಜುಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮತ್ತು ಅವುಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು, ಸಕ್ಕರೆ ಮತ್ತು ಉಪ್ಪು (HFSS) ಹೊಂದಿರುವ ಆಹಾರ ಪದಾರ್ಥಗಳ ಮಾರಾಟ, ಉಚಿತ ವಿತರಣೆ, ಜಾಹೀರಾತು ಮತ್ತು ಪ್ರಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಜುಲೈ 24, 2026ರಂದು ಹೊರಡಿಸಲಾದ ಸಲಹಾ ಸೂಚನೆಯ ಪ್ರಕಾರ, ಇಲಾಖೆಯ ಪರಿಶೀಲನೆ ವೇಳೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದಲ್ಲಿ ವೈಟ್ ಬ್ರೆಡ್, ಪಾಸ್ತಾ ಹಾಗೂ ಸಂಸ್ಕರಿತ ತಿಂಡಿಗಳಂತಹ ಅಧಿಕ ಸಂಸ್ಕರಿತ ಕಾರ್ಬೋಹೈಡ್ರೇಟ್ಗಳ ಬಳಕೆ ಕಂಡುಬಂದಿದೆ. ಇವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ವೇಗವಾಗಿ ಹೆಚ್ಚಿಸುವ ಸಾಧ್ಯತೆ ಇರುವುದರಿಂದ ಮಕ್ಕಳಿಗೆ ಸಮತೋಲಿತ ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಅಗತ್ಯ ಎಂದು ಇಲಾಖೆ ತಿಳಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಶಾಲಾ ಮಕ್ಕಳಿಗೆ ಸುರಕ್ಷಿತ ಮತ್ತು ಸಮತೋಲಿತ ಆಹಾರ ನಿಯಮಾವಳಿ, 2020ರಡಿ ಈ ಸೂಚನೆಗಳನ್ನು ಆಹಾರ ವ್ಯಾಪಾರಿಗಳು, ಶಾಲಾ ಆಡಳಿತ ಮಂಡಳಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಶಾಲಾ ಆವರಣದಲ್ಲಿ HFSS ಆಹಾರ ಮಾರಾಟವಾಗದಂತೆ ನೋಡಿಕೊಳ್ಳುವುದು, ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ಹಾಗೂ 50 ಮೀಟರ್ ವ್ಯಾಪ್ತಿಯಲ್ಲಿಯೂ ಇಂತಹ ಆಹಾರಗಳ ಮಾರಾಟ ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಶಾಲೆಗಳ ಸಮೀಪದ ಹೋಟೆಲ್ಗಳು, ಬೇಕರಿಗಳು, ಕ್ಯಾಂಟೀನ್ಗಳು, ಆಹಾರ ಮಳಿಗೆಗಳು ಸೇರಿದಂತೆ ಎಲ್ಲಾ ಆಹಾರ ವ್ಯಾಪಾರಿಗಳು ಕಡ್ಡಾಯವಾಗಿ ನೋಂದಣಿ ಅಥವಾ ಪರವಾನಗಿ ಪಡೆದು ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದರೆ ಆಹಾರ ಸುರಕ್ಷತಾ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ನಿಯಮ ಉಲ್ಲಂಘಿಸುವ ಆಹಾರ ವ್ಯಾಪಾರಿಗಳಿಗೆ ಸುಧಾರಣಾ ನೋಟಿಸ್, ಪರವಾನಗಿ ಅಮಾನತು ಅಥವಾ ರದ್ದು, ಆಹಾರ ವಸ್ತುಗಳ ವಶಪಡಿಸಿಕೆ ಹಾಗೂ ಅಗತ್ಯವಿದ್ದರೆ ನ್ಯಾಯಾಂಗ ಕ್ರಮ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಶಾಲೆಗಳು ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿದ್ಯಾರ್ಥಿಗಳಿಗೆ ಉಚಿತ ಶುದ್ಧ ಕುಡಿಯುವ ನೀರು ಒದಗಿಸಬೇಕು. ವಾರದ ಆಹಾರ ಪಟ್ಟಿಯಲ್ಲಿ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಹಣ್ಣು, ತರಕಾರಿಗಳು, ಕಾಯಿ-ಬೀಜಗಳು ಹಾಗೂ ತಾಜಾ ಆಹಾರಗಳಿಗೆ ಆದ್ಯತೆ ನೀಡಬೇಕು. ಮರುಬಳಕೆಯ ಎಣ್ಣೆ ಬಳಸಬಾರದು ಮತ್ತು ಪೌಷ್ಟಿಕಾಂಶ ಹೆಚ್ಚಿಸಲು ಫೋರ್ಟಿಫೈಡ್ ಆಹಾರ ಪದಾರ್ಥಗಳನ್ನು ಬಳಸಬೇಕು ಎಂದು ಸೂಚಿಸಲಾಗಿದೆ.
ಇದಲ್ಲದೆ, ಇಡ್ಲಿ, ಉಪ್ಮಾ, ಪೋಹಾ, ಖಿಚ್ಡಿ, ಧೋಖ್ಲಾ, ಚೀಲಾ ಮುಂತಾದ ಆರೋಗ್ಯಕರ ತಿಂಡಿಗಳನ್ನು ಉತ್ತೇಜಿಸುವಂತೆ ಹಾಗೂ ಅಧಿಕ ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಫ್ಯಾಟ್, ಹೆಚ್ಚುವರಿ ಸಕ್ಕರೆ ಮತ್ತು ಸೋಡಿಯಂ ಹೊಂದಿರುವ ಆಹಾರ ಪದಾರ್ಥಗಳನ್ನು ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಲಭ್ಯವಾಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಮಕ್ಕಳ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಸುರಕ್ಷಿತ ಆಹಾರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಸಲಹಾ ಸೂಚನೆಯನ್ನು ಹೊರಡಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.
