ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದಲ್ಲಿ ರಾಜ್ಯ ಸರ್ಕಾರದ ವಿಶೇಷ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆ (ಎಸ್ಐಪಿ) ಅಡಿಯಲ್ಲಿ ಸುಮಾರು 3.20 ಕಿ.ಮೀ ರಸ್ತೆಗಳ ಡಾಂಬರೀಕರಣ ಕಾಮಗಾರಿಯನ್ನು ಸೋಮವಾರ ಕೈಗೆತ್ತಿಕೊಳ್ಳಲಾಗಿದೆ ಎಂದು ಪಾಲಿಕೆಯ ಆಯುಕ್ತ ಜಗದೀಶ್ ಜಿ ತಿಳಿಸಿದ್ದಾರೆ.
ಲಕ್ಷ್ಮಿ ಮುಖ್ಯ ರಸ್ತೆ, ಬಸಪ್ಪ ರಸ್ತೆ, ಚರ್ಚ್ ರಸ್ತೆ, ನಂಜಪ್ಪ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಪಾಲಿಕೆ ತಿಳಿಸಿದೆ. ಇದರಿಂದ ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಜಗದೀಶ್ ಹೇಳಿದ್ದಾರೆ. ಡಾಂಬರೀಕರಣ ಯಾವಾಗ ಪೂರ್ಣಗೊಳ್ಳಲಿದೆ ಎಂಬುದನ್ನು ಪಾಲಿಕೆ ತಿಳಿಸಿಲ್ಲ.
ರಸ್ತೆ ಕಾಮಗಾರಿಗೆ ಆದ್ಯತೆ ನೀಡಲು ಎಂಜಿನಿಯರ್ಗಳಿಗೆ ಸೂಚನೆ
ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಹಾಗೂ ಅವುಗಳನ್ನು ನಿರಂತರವಾಗಿ ಕೈಗೊಳ್ಳುವಂತೆ ಜಗದೀಶ್ ಎಂಜಿನಿಯರ್ಗಳಿಗೆ ಸೂಚಿಸಿದ್ದಾರೆ.
ವಾರ್ಡ್ ಒನ್ ಅಡಿ ರಸ್ತೆ ಗುಂಡಿ ಮುಚ್ಚುವ ಕೆಲಸ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ನಿರ್ದೇಶನದಂತೆ ‘ವಾರ್ಡ್ ಒನ್’ ಅಭಿಯಾನದಡಿ ಭಾನುವಾರ ಮತ್ತು ಸೋಮವಾರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನೂ ನಡೆಸಲಾಗಿದೆ ಎಂದು ಪಾಲಿಕೆ ತಿಳಿಸಿದೆ. ಶಾಂತಿನಗರ ವಿಭಾಗದ ಅಶೋಕ ನಗರ ಸೇರಿದಂತೆ ಬೆಂಗಳೂರು ಕೇಂದ್ರದ ಆರು ವಾರ್ಡ್ಗಳಲ್ಲಿ ವಾರ್ಡ್ ಒನ್ ಅಭಿಯಾನ ಭಾನುವಾರ ಆರಂಭವಾಗಿತ್ತು.
