ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲು ಸಮರ್ಪಕ ಬಳಕೆಗೆ ಕ್ರಿಯಾಯೋಜನೆ: ಕಾರಜೋಳ
ವಿಜಯನಗರ:
ನ್ಯಾಯಾಧೀಕರಣ-1 ಮತ್ತು ನ್ಯಾಯಾಧೀಕರಣ-2ರಲ್ಲಿ ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲನನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯದ ವೈಕುಂಠ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಹಂಚಿಕೆಯಾದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ,ಆಡಳಿತಾತ್ಮಕ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ನೀರಿಗೆ ಸಂಬಂಧಿಸಿದಂತೆ ಕೆಲ ಸಮಸ್ಯೆಗಳ ವ್ಯಾಜ್ಯಗಳು ಸುಪ್ರೀಂಕೋರ್ಟ್‍ನಲ್ಲಿದ್ದು, ಅವುಗಳ ತೀರ್ಪು ಬರುವವರೆಗೆ ನಾವೆಲ್ಲ ಕಾಯಬೇಕಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಹಾಗೂ ಜಲಸಂಪನ್ಮೂಲ ವಿಷಯಕ್ಕೆ ಸಂಬಂಧಿಸಿದಂತೆ ಅಗಾಧ ಅನುಭವ ಹೊಂದಿರುವುದರಿಂದ ಎಲ್ಲ ಯೋಜನೆಗಳು ಪೂರ್ಣಗೊಳಿಸಲಿಕ್ಕೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಮ್ಮತಿ ಪಡೆದುಕೊಂಡು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹತ್ತಿರ ಸಮತೋಲನ ಜಲಾಶಯ ನಿರ್ಮಿಸಲು ಯೋಜಿಸಲಾಗಿದ್ದು, ಡಿಪಿಎಆರ್ ತಯಾರಿಕೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮೂರು ರಾಜ್ಯಗಳ ಸಭೆ ಕರೆದು ಸಮ್ಮತಿ ಪಡೆದುಕೊಳ್ಳಲಾಗುವುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯದ ಒಟ್ಟು ಸಂಗ್ರಹಣಾ ಸಾಮಥ್ರ್ಯ 132.47 ಟಿ.ಎಂ.ಸಿ ಇದ್ದು , ಪ್ರಸಕ್ತ ಹೂಳು ತುಂಬಿರುವುದರಿಂದ ಈ ಸಾಮಥ್ರ್ಯವು 100.855 ಟಿ.ಎಂ.ಸಿಗೆ ಇಳಿಕೆಯಾಗಿದೆ. ಇದರಿಂದ 31.615 ಟಿಎಂಸಿ ನೀರಿನ ಕೊರತೆಯಾಗಿದ್ದು, ಇದನ್ನು ಸರಿದೂಗಿಸಲು ನವಲಿ ಬಳಿ ಸಮತೋಲನ ಜಲಾಶಯ ನಿರ್ಮಿಸುವುದಕ್ಕೆ ಯೋಜಿಸಲಾಗಿದೆ ಎಂದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿಎಂಸಿ ನೀರಿನ ಹಂಚಿಕೆಯಾಗಿದೆ ಎಂದ ಅವರು, ಈ ಯೋಜನೆ ಅಡಿ ಬಲಭಾಗದಲ್ಲಿ ಒಟ್ಟು 35,791 ಎಕರೆ (14485 ಹೆಕ್ಟರ್) ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಯ ಎಡಭಾಗದಲ್ಲಿ ಒಟ್ಟು 216467 ಎಕರೆ (87597 ಹೆಕ್ಟರ್ ) ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದರು.
ಈ ವಲಯದ ವ್ಯಾಪ್ತಿಯಲ್ಲಿ ಒಟ್ಟು 8 ಏತ ನೀರವಾರಿ ಯೋಜನೆಗಳಿಂದ 122 ಕೆರೆಗಳು ಮತ್ತು 2 ಜಲಾಶಯ ತುಂಬಿಸಿಲು 1800 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. 172210 ಎಕರೆ (700 ಹೆಕ್ಟರ್) ಬಾಧಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ, ಅಂತರ್ಜಲ ಸಮಸ್ಯೆ, ನೀರಿನ ಸಮಸ್ಯೆ ನೀಗಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.
ಈ ವಲಯದ ವ್ಯಾಪ್ತಿಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ನೀರಾವರಿಗಾಗಿ ನಿರ್ಮಿಸಿರುವ ಸುಮಾರು 500 ವರ್ಷಗಳ ಹಿಂದಿನ ಅನ್‍ಲೈನ್ಡ್ 16 ಕಾಲುವೆಗಳು ಮತ್ತು 11 ಅಣೆಕಟ್ಟುಗಳಿದ್ದು,ಅವುಗಳಲ್ಲಿ ಸದ್ಯಕ್ಕೆ ಪ್ಯಾಕೇಜ್-1ಅಡಿ ಕಾಲುವೆ ಮತ್ತು ಅಣೆಕಟ್ಟು ಆಧುನೀಕರಣಗೊಳಿಸಲು 371 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.
ಇನ್ನುಳಿದ 8 ಅಣೆಕಟ್ಟು 1 ಕಾಲುವೆ ಆಧನೀಕರಣವನ್ನು ಸಹ ಕೈಗೆತ್ತಿಕೊಳ್ಳಲು ರೂ.139 ಕೋಟಿಗಳಿಗೆ ಸದ್ಯದಲ್ಲೇ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವ ಕಾರಜೋಳ ಅವರು ಮೇಕೆದಾಟು ಯೋಜನೆ ಜಾರಿಗೆ ಯಾರ ಅನುಮತಿಯೂ ಅಗತ್ಯವಿಲ್ಲ. ಈ ವಿಚಾರ ಸದ್ಯಕ್ಕೆ ಸುಪ್ರೀಂಕೋರ್ಟ್‍ನಲ್ಲಿರುವುದರಿಂದ ಹೆಚ್ಚಿಗೆ ಮಾತನಾಡಲಾರೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಆ.21ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಆಗಸ್ಟ್ ತಿಂಗಳಲ್ಲಿ ಬಹುತೇಕ ಎಲ್ಲ ಡ್ಯಾಂಗಳು ತುಂಬಿರುವುದು ಇತಿಹಾಸದಲ್ಲಿಯೇ ಮೊದಲನೇ ಬಾರಿ ಎಂದು ಹೇಳಿದ ಸಚಿವ ಕಾರಜೋಳ ಅವರು ಪ್ರತಿವರ್ಷವೂ ಇದೇ ತರಹ ಮಳೆಯಾಗಲಿ ಎಂದು ಗಂಗಾಮಾತೆಗೆ ಬಾಗಿನ ಅರ್ಪಿಸಿ ಕೋರಿರುವೆ ಎಂದರು.
ಮುಖ್ಯಮಂತ್ರಿಗಳು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಅಂದು ನೀರಾವರಿ ಯೋಜನೆಗಳ ಕುರಿತು ಹೆಚ್ಚಿನ ಗಮನಹರಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಂಸದರಾದ ಕರಡಿ ಸಂಗಣ್ಣ,ವೈ.ದೇವೇಂದ್ರಪ್ಪ, ಶಾಸಕರಾದ ಬಸವರಾಜ ದಡೇಸೂಗುರ,ಪರಣ್ಣ ಮನಳ್ಳಿ,ವೆಂಕಟರಾವ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.