ವೃತ್ತಿ ತೆರಿಗೆ ಪಾವತಿದಾರರಿಗೆ ಸಿಹಿಸುದ್ದಿ: ಜುಲೈ 1ರಿಂದ ನೋಟಿಸ್, ಉತ್ತರ ಎಲ್ಲವೂ ಆನ್ಲೈನ್; ವಾಣಿಜ್ಯ ತೆರಿಗೆ ಇಲಾಖೆಯ ಹೊಸ ಡಿಜಿಟಲ್ ವ್ಯವಸ್ಥೆ ಜಾರಿ
ಬೆಂಗಳೂರು, ಜುಲೈ 07: ರಾಜ್ಯದ ವೃತ್ತಿ ತೆರಿಗೆ (Professional Tax) ಪಾವತಿದಾರರಿಗೆ ಮತ್ತಷ್ಟು ವೇಗವಾದ, ಪಾರದರ್ಶಕ ಹಾಗೂ ಸುಲಭ ಸೇವೆ ಒದಗಿಸುವ ಉದ್ದೇಶದಿಂದ ವಾಣಿಜ್ಯ ತೆರಿಗೆ ಇಲಾಖೆಯು ಮಹತ್ವದ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಜುಲೈ 1, 2026ರಿಂದ ಇಲಾಖೆಯ ಅಧಿಕೃತ ವೃತ್ತಿ ತೆರಿಗೆ ಪೋರ್ಟಲ್ ಅನ್ನು ನವೀಕರಿಸಲಾಗಿದ್ದು, ಇನ್ನು ಮುಂದೆ ಇಲಾಖೆಯ ಎಲ್ಲಾ ಅಧಿಕೃತ ನೋಟಿಸ್ಗಳು ಹಾಗೂ ತೆರಿಗೆದಾರರ ಉತ್ತರಗಳು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಿರ್ವಹಿಸಲ್ಪಡಲಿವೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತ ವಿಪುಲ್ ಬನ್ಸಾಲ್ ತಿಳಿಸಿದ್ದಾರೆ.
ಕರ್ನಾಟಕ ವೃತ್ತಿಗಳು, ವ್ಯಾಪಾರಗಳು, ಆಜೀವಿಕೆಗಳು ಮತ್ತು ಉದ್ಯೋಗಗಳ ಮೇಲಿನ ತೆರಿಗೆ ನಿಯಮಗಳು–1976ರ ನಿಯಮ 27ರ ಅನ್ವಯ, ಇಲಾಖೆಯಿಂದ ಹೊರಡಿಸಲಾಗುವ ಎಲ್ಲಾ ನೋಟಿಸ್ಗಳು, ಸಮನ್ಸ್ಗಳು, ನಿರ್ಧಾರಗಳು, ಆದೇಶಗಳು ಹಾಗೂ ಇತರೆ ಅಧಿಕೃತ ಸಂವಹನಗಳನ್ನು ಇನ್ನು ಮುಂದೆ ಅಧಿಕೃತ ವೃತ್ತಿ ತೆರಿಗೆ ಪೋರ್ಟಲ್ ಮೂಲಕವೇ ತೆರಿಗೆದಾರರಿಗೆ ರವಾನಿಸಲಾಗುತ್ತದೆ.
ಕಚೇರಿಗೆ ಹೋಗುವ ಅಗತ್ಯವಿಲ್ಲ
ಹೊಸ ವ್ಯವಸ್ಥೆಯ ಪ್ರಮುಖ ವಿಶೇಷತೆ ಎಂದರೆ, ನೋಂದಾಯಿತ ವೃತ್ತಿ ತೆರಿಗೆ ಪಾವತಿದಾರರು ಇಲಾಖೆಯಿಂದ ಬರುವ ನೋಟಿಸ್ಗಳಿಗೆ ತಮ್ಮ ಉತ್ತರ, ಸಮಜಾಯಿಷಿ, ಆಕ್ಷೇಪಣೆ ಹಾಗೂ ಇತರೆ ದಾಖಲೆಗಳನ್ನು ನೇರವಾಗಿ ಪೋರ್ಟಲ್ನಲ್ಲೇ ಅಪ್ಲೋಡ್ ಮಾಡಿ ಸಲ್ಲಿಸಬಹುದು. ಇದರಿಂದ ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದ್ದು, ಸೇವೆಗಳು ಮತ್ತಷ್ಟು ಸುಲಭವಾಗಲಿವೆ.
ಪೋರ್ಟಲ್ನ್ನು ನಿಯಮಿತವಾಗಿ ಪರಿಶೀಲಿಸಿ
ಎಲ್ಲಾ ನೋಂದಾಯಿತ ವೃತ್ತಿ ತೆರಿಗೆ ಪಾವತಿದಾರರು ಇಲಾಖೆಯ ಪೋರ್ಟಲ್ ಅನ್ನು ನಿಯಮಿತವಾಗಿ ಪರಿಶೀಲಿಸಿ, ಇಲಾಖೆಯಿಂದ ಬರುವ ಸಂವಹನಗಳನ್ನು ಗಮನಿಸಬೇಕು. ಕಾಯ್ದೆ ಹಾಗೂ ನಿಯಮಗಳ ಅನ್ವಯ ನಿಗದಿತ ಅವಧಿಯೊಳಗೆ ಆನ್ಲೈನ್ ಮೂಲಕವೇ ಉತ್ತರ ಸಲ್ಲಿಸಿ ಇಲಾಖೆಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಪಾರದರ್ಶಕ ಮತ್ತು ವೇಗದ ಸೇವೆಗೆ ಉತ್ತೇಜನ
ಹೊಸ ಡಿಜಿಟಲ್ ವ್ಯವಸ್ಥೆಯಿಂದ ದಾಖಲೆ ನಿರ್ವಹಣೆ ಸುಲಭವಾಗುವುದು, ಪ್ರಕ್ರಿಯೆಗಳು ವೇಗಗೊಳ್ಳುವುದು, ಪಾರದರ್ಶಕತೆ ಹೆಚ್ಚುವುದು ಹಾಗೂ ತೆರಿಗೆದಾರರಿಗೆ ಸಮಯ ಮತ್ತು ವೆಚ್ಚದ ಉಳಿತಾಯವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ
ವೃತ್ತಿ ತೆರಿಗೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ವೃತ್ತಿ ತೆರಿಗೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಇಲಾಖೆಯ ಉಚಿತ ಸಹಾಯವಾಣಿ 1800-425-6300 ಗೆ ಕರೆ ಮಾಡಬಹುದು. ಜೊತೆಗೆ ಅಧಿಕೃತ ವೃತ್ತಿ ತೆರಿಗೆ ಪೋರ್ಟಲ್ ಮೂಲಕವೂ ಎಲ್ಲಾ ಸೇವೆಗಳು ಲಭ್ಯವಿರುತ್ತವೆ ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.