ಕರ್ನಾಟಕದಲ್ಲಿ ಯುವ ಯುಗ ಆರಂಭ; ಎಲ್ಲ ವರ್ಗಗಳನ್ನು ಜೊತೆಗೂಡಿಸಿಕೊಂಡು ಸಾಗುತ್ತೇನೆ: ಮುಖ್ಯಮಂತ್ರಿ ನಿಯೋಜಿತ ಡಿ.ಕೆ. ಶಿವಕುಮಾರ್
ನವದೆಹಲಿ, ಜೂನ್ 2: “ಕರ್ನಾಟಕದ ಜನರು ನನ್ನ ಮೇಲೆ ವಿಶ್ವಾಸ ಹೊಂದಿದ್ದಾರೆ. ರೈತರು, ಮಹಿಳೆಯರು ಹಾಗೂ ಯುವ ಪೀಳಿಗೆಯನ್ನು ಒಳಗೊಂಡಂತೆ ಸಮಾಜದ ಪ್ರತಿಯೊಂದು ವರ್ಗವನ್ನು ಜೊತೆಗೂಡಿಸಿಕೊಂಡು ಸಾಗುತ್ತೇನೆ. ರಾಜ್ಯದಲ್ಲಿ ಹೊಸ ಯುವ ಯುಗ ಆರಂಭವಾಗಲಿದೆ” ಎಂದು ಮುಖ್ಯಮಂತ್ರಿ ನಿಯೋಜಿತ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ರಾಜಕೀಯ ಪಯಣವನ್ನು ಕನಸಿನ ಸಾಕಾರವೆಂದು ಕರೆಯದೇ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲ ಎಂದು ಬಣ್ಣಿಸಿದರು.
“ನಾನು ಇದನ್ನು ಕನಸು ಎಂದು ಕರೆಯುವುದಿಲ್ಲ. ಇದು ಕಠಿಣ ಪರಿಶ್ರಮ ಮತ್ತು ಬದ್ಧತೆಯ ಫಲ. ಇದು ಕೇವಲ ಡಿ.ಕೆ. ಶಿವಕುಮಾರ್ ಅವರ ಕಥೆಯಲ್ಲ. ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಶ್ರಮದ ಪ್ರತಿಫಲವಾಗಿದೆ” ಎಂದು ಹೇಳಿದರು.
ಗಾಂಧಿ ಕುಟುಂಬದ ಬಗ್ಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದ ವಿವಿಧ ಹಂತಗಳಲ್ಲಿ ಗಾಂಧಿ ಕುಟುಂಬ ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿಗಳನ್ನು ನೀಡಿದೆ ಎಂದು ಹೇಳಿದರು.
“ರಾಜೀವ್ ಗಾಂಧಿ ಅವರ ಕಾಲದಿಂದ ಇಂದಿನವರೆಗೂ ನಾನು ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಗಾಂಧಿ ಕುಟುಂಬ ನನ್ನ ಮೇಲೆ ವಿಶ್ವಾಸವಿಟ್ಟು ಹಲವು ಅವಕಾಶಗಳನ್ನು ನೀಡಿದೆ” ಎಂದು ತಿಳಿಸಿದರು.
ನೆಹರು-ಗಾಂಧಿ ಕುಟುಂಬದ ತ್ಯಾಗಗಳನ್ನು ಉಲ್ಲೇಖಿಸಿದ ಅವರು, “ಸೋನಿಯಾ ಗಾಂಧಿ ಅವರು ಪ್ರಧಾನಿಯಾಗುವ ಅವಕಾಶವಿದ್ದರೂ ಅದನ್ನು ತ್ಯಜಿಸಿದರು. ರಾಹುಲ್ ಗಾಂಧಿಯವರಿಗೂ ಅವಕಾಶಗಳಿದ್ದವು. ಆದರೆ ಅವರು ಅಧಿಕಾರಕ್ಕಾಗಿ ಅಲ್ಲ, ದೇಶಕ್ಕಾಗಿ ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡರು” ಎಂದು ಹೇಳಿದರು.
“ಭಾರತ್ ಜೋಡೊ ಯಾತ್ರೆಯ ಮೂಲಕ ರಾಹುಲ್ ಗಾಂಧಿ ದೇಶದ ಜನರ ನಡುವೆ ನಡೆದಾಡಿದರು. ಇಂತಹ ಕಠಿಣ ನಿರ್ಧಾರವನ್ನು ಎಷ್ಟು ನಾಯಕರು ತೆಗೆದುಕೊಂಡಿದ್ದಾರೆ?” ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೇಲಿನ ತಮ್ಮ ಗೌರವವನ್ನು ನೆನಪಿಸಿಕೊಂಡ ಶಿವಕುಮಾರ್, “ಇಂದಿರಾ ಗಾಂಧಿಯವರ ನಿಧನದ ನಂತರ ನನ್ನ ಚಿತ್ರಮಂದಿರಕ್ಕೆ ‘ಇಂದಿರಾ ಗಾಂಧಿ ಚಿತ್ರ ಮಂದಿರ’ ಎಂದು ಹೆಸರಿಟ್ಟಿದ್ದೆ. ಅದು ಗಾಂಧಿ ಕುಟುಂಬದ ಮೇಲಿನ ನನ್ನ ಬದ್ಧತೆಯ ಪ್ರತೀಕ” ಎಂದು ಹೇಳಿದರು.
ತಮ್ಮ ಮೇಲೆ ಪಕ್ಷ ಹಾಗೂ ಜನರು ಇಟ್ಟಿರುವ ನಂಬಿಕೆಗೆ ಬದ್ಧನಾಗಿರುವುದಾಗಿ ಹೇಳಿದ ಅವರು, “ಜನರ ನಿರೀಕ್ಷೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡುತ್ತೇನೆ. ಮುಂದಿನ ದಾರಿ ಸುಲಭವಲ್ಲ, ಆದರೆ ಜವಾಬ್ದಾರಿಯಿಂದ ಅದನ್ನು ನಿರ್ವಹಿಸುತ್ತೇನೆ” ಎಂದರು.
ಕರ್ನಾಟಕದ ಮಹತ್ವದ ಕುರಿತು ಮಾತನಾಡಿದ ಅವರು, “ಬೆಂಗಳೂರು ಮತ್ತು ಕರ್ನಾಟಕದ ಮೂಲಕವೇ ಜಗತ್ತು ಭಾರತವನ್ನು ನೋಡುತ್ತದೆ. ಕರ್ನಾಟಕ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಹೀಗಾಗಿ ನನ್ನ ಮೇಲಿರುವ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ” ಎಂದು ಹೇಳಿದರು.
ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆಗಳು ರಾಜ್ಯದಲ್ಲಿ ಹೊಸ ರಾಜಕೀಯ ಅಧ್ಯಾಯಕ್ಕೆ ಮುನ್ನುಡಿ ಬರೆಯುವಂತಿವೆ.
