ಎಸ್ಸಿಒ ಕೈಗಾರಿಕಾ ಸಚಿವರ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಕಿರ್ಗಿಜ್ ಗಣರಾಜ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ
ನವದೆಹಲಿ/ಬಿಷ್ಕೇಕ್, ಜೂನ್ 2: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಕೈಗಾರಿಕಾ ಸಚಿವರ ಶೃಂಗಸಭೆಯಲ್ಲಿ ಭಾಗವಹಿಸಲು ಕಿರ್ಗಿಜ್ ಗಣರಾಜ್ಯದ ರಾಜಧಾನಿ ಬಿಷ್ಕೇಕ್ಗೆ ಆಗಮಿಸಿದ್ದಾರೆ. ಬುಧವಾರ ಆರಂಭವಾಗಲಿರುವ ನಾಲ್ಕು ದಿನಗಳ ಶೃಂಗಸಭೆಯಲ್ಲಿ ಭಾರತವನ್ನು ಅವರು ಪ್ರತಿನಿಧಿಸಲಿದ್ದಾರೆ.
ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತದ ಕೈಗಾರಿಕಾ ಸಾಮರ್ಥ್ಯ, ತಾಂತ್ರಿಕ ಪ್ರಗತಿ ಹಾಗೂ ಉತ್ಪಾದನಾ ವಲಯದ ಸಾಧನೆಗಳನ್ನು ಕುಮಾರಸ್ವಾಮಿ ಅವರು ಎಸ್ಸಿಒ ಸದಸ್ಯ ರಾಷ್ಟ್ರಗಳ ಮುಂದೆ ಮಂಡಿಸಲಿದ್ದಾರೆ.
ಈ ಭೇಟಿ ಭಾರತವು ಯುರೇಷಿಯಾ ಪ್ರದೇಶದಲ್ಲಿ ತನ್ನ ಆರ್ಥಿಕ ಹಾಗೂ ಕಾರ್ಯತಂತ್ರದ ಪ್ರಭಾವವನ್ನು ವಿಸ್ತರಿಸುತ್ತಿರುವ ಮಹತ್ವದ ಸಂದರ್ಭದಲ್ಲಿ ನಡೆಯುತ್ತಿರುವುದರಿಂದ ವಿಶೇಷ ಪ್ರಾಮುಖ್ಯತೆ ಪಡೆದಿದೆ. ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಬಳಿಕ ಎಸ್ಸಿಒ ಸಚಿವರ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಎರಡನೇ ಪ್ರಮುಖ ಕನ್ನಡಿಗ ನಾಯಕ ಎಂಬ ಹೆಗ್ಗಳಿಕೆಗೆ ಕುಮಾರಸ್ವಾಮಿ ಪಾತ್ರರಾಗಿದ್ದಾರೆ.
ಶೃಂಗಸಭೆಯಲ್ಲಿ ಕೈಗಾರಿಕಾ ಸಹಕಾರ, ತಾಂತ್ರಿಕ ಪಾಲುದಾರಿಕೆ, ಸುಸ್ಥಿರ ಉತ್ಪಾದನೆ, ನಾವೀನ್ಯತೆ ಆಧಾರಿತ ಬೆಳವಣಿಗೆ ಹಾಗೂ ಪೂರೈಕೆ ಸರಪಳಿಗಳ ಬಲವರ್ಧನೆ ಕುರಿತು ಭಾರತ ತನ್ನ ದೃಷ್ಟಿಕೋನವನ್ನು ಮಂಡಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಈ ಶೃಂಗಸಭೆಯಲ್ಲಿ ಭಾರತದ ಭಾಗವಹಿಸುವಿಕೆ ಮಹತ್ವ ಪಡೆದಿದೆ. ದೇಶೀಯ ಉತ್ಪಾದನೆ, ಹಸಿರು ತಂತ್ರಜ್ಞಾನ, ಡಿಜಿಟಲ್ ನಾವೀನ್ಯತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಕುಮಾರಸ್ವಾಮಿ ಅವರು ಪ್ರಸ್ತುತಪಡಿಸಲಿದ್ದಾರೆ.
ಎಸ್ಸಿಒ ಸದಸ್ಯ ರಾಷ್ಟ್ರಗಳ ನಡುವೆ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು, ತಂತ್ರಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು, ಹೂಡಿಕೆ ಅವಕಾಶಗಳನ್ನು ವಿಸ್ತರಿಸುವುದು ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಪಾಲುದಾರಿಕೆಗಳನ್ನು ನಿರ್ಮಿಸುವುದು ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಕೈಗಾರಿಕೆಗಳಿಗೆ ಮಧ್ಯ ಏಷ್ಯಾ ಮತ್ತು ಯುರೇಷಿಯಾ ರಾಷ್ಟ್ರಗಳಲ್ಲಿ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಭಾರತೀಯ ಉತ್ಪನ್ನಗಳ ವ್ಯಾಪಾರ ವಿಸ್ತರಣೆಗೆ ವೇದಿಕೆ ಕಲ್ಪಿಸುವುದರ ಮೇಲೂ ಚರ್ಚೆಗಳು ನಡೆಯಲಿವೆ.
ಕೈಗಾರಿಕಾ ಪಾರ್ಕ್ಗಳ ಅಭಿವೃದ್ಧಿ, ನಾವೀನ್ಯತೆ ಕೇಂದ್ರಗಳ ಸ್ಥಾಪನೆ, ಸುಸ್ಥಿರ ಉತ್ಪಾದನಾ ಪದ್ಧತಿಗಳು ಮತ್ತು ಆಧುನಿಕ ಕೈಗಾರಿಕಾ ತಂತ್ರಜ್ಞಾನಗಳ ಬಳಕೆಗೆ ಸಂಬಂಧಿಸಿದ ಹಲವು ವಿಷಯಗಳು ಸಚಿವರ ಮಟ್ಟದ ಚರ್ಚೆಗಳ ಭಾಗವಾಗಲಿವೆ.
2017ರಲ್ಲಿ ಎಸ್ಸಿಒ ಪೂರ್ಣ ಸದಸ್ಯತ್ವ ಪಡೆದ ನಂತರ ಭಾರತವು ರಾಜಕೀಯ, ಆರ್ಥಿಕ, ಭದ್ರತೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಪಾತ್ರವನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಬಾಂಧವ್ಯ ಗಟ್ಟಿಗೊಳಿಸಲು ಎಸ್ಸಿಒ ವೇದಿಕೆ ಮಹತ್ವದ ಅವಕಾಶ ಒದಗಿಸುತ್ತಿದೆ.
ಚೀನಾ ಹಾಗೂ ಮಧ್ಯ ಏಷ್ಯಾದ ರಾಷ್ಟ್ರಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಿರ್ಗಿಜ್ ಗಣರಾಜ್ಯವು ಭವಿಷ್ಯದ ಕೈಗಾರಿಕಾ ಸಹಕಾರ ಮತ್ತು ಹೂಡಿಕೆ ಚರ್ಚೆಗಳಿಗೆ ಸೂಕ್ತ ಕೇಂದ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸಿಒ ರಾಷ್ಟ್ರಗಳ ನಡುವೆ ಬಲವಾದ, ಸಮೃದ್ಧ ಮತ್ತು ಸಹಕಾರದ ಯುರೇಷಿಯಾ ನಿರ್ಮಾಣದ ದೃಷ್ಟಿಕೋನವನ್ನು ಈ ಶೃಂಗಸಭೆ ಪ್ರತಿಬಿಂಬಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಭೇಟಿ ಭಾರತವು ಬಹುಪಕ್ಷೀಯ ಸಹಕಾರಕ್ಕೆ ನೀಡುತ್ತಿರುವ ಮಹತ್ವವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಧ್ಯ ಏಷ್ಯಾ ಮತ್ತು ಯುರೇಷಿಯಾ ರಾಷ್ಟ್ರಗಳೊಂದಿಗೆ ಆರ್ಥಿಕ ಹಾಗೂ ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಶೃಂಗಸಭೆಯಿಂದ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಹಾಗೂ ಕೈಗಾರಿಕಾ ಸಹಕಾರ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಭಾರತ ಸೇರಿದಂತೆ ಎಸ್ಸಿಒ ಸದಸ್ಯ ರಾಷ್ಟ್ರಗಳಿಗೆ ಇದರ ಲಾಭ ದೊರೆಯಲಿದೆ.
