ಬೆಂಗಳೂರು:
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು 3 ತಿಂಗಳ ಕಾಲಾವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಪಂಚಮಸಾಲಿ ಶ್ರೀಗಳಿಗೆ ಮನವಿ ಮಾಡಲು ತೀರ್ಮಾನಿಸಿದೆ.
ಸಚಿವ ಸಿ.ಸಿ.ಪಾಟೀಲ್ ಸರ್ಕಾರಿ ನಿವಾಸದಲ್ಲಿ ನಡೆದ ಗೃಹ ಸಚಿವರ ಜತೆಗಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತಂತೆ ಸ್ವಾಮೀಜಿಗಳೊಂದಿಗೆ ಮಾತುಕತೆ ಸರ್ಕಾರ ಸಿದ್ಧವಿದೆ. ಮಾತುಕತೆಗೆ ಸ್ವಾಮೀಜಿಗಳಿಗೆ ಆಹ್ವಾನ ನೀಡುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಬೃಹತ್ ಸಮಾವೇಶನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಸಚಿವ ಸಿ.ಸಿ.ಪಾಟೀಲ್ ನಿವಾಸದಲ್ಲಿ ಸಭೆ ನಡೆಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಿ.ಸಿ.ಪಾಟೀಲ್, ಸಚಿವ ಮುರಗೇಶ್ ನಿರಾಣಿ,ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಭಾಗವಹಿಸಿ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಬೊಮ್ಮಾಯಿ ಅವರು, ‘2ಎ ಮೀಸಲಾತಿಗೆ ಲಿಂಗಾಯತ ಪಂಚಮಸಾಲಿ ಸಮುದಾಯದ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಜತೆ ಮಾತನಾಡಿದ್ದೇವೆ. ಹಿಂದುಳಿದ ವರ್ಗಗಳ ಆಯೋಗ ಸಭೆ ನಡೆಸಿ ಈ ಬಗ್ಗೆ ಸಮಾಲೋಚಿಸಲಿದೆ. ಸಂವಿಧಾನದ ಪ್ರಕಾರ ಆಯೋಗದ ಮೂಲಕವೇ ಶಿಫಾರಸು ಬರಬೇಕು. ಈ ಮಧ್ಯೆ ಇಂದು ಪಂಚಮಸಾಲಿ ಸಮಾವೇಶ ನಡೆಯುತ್ತಿದೆ. ಸ್ವಾಮೀಜಿಗಳ ಜತೆ ಈಗಾಗಲೇ ಮಾತಾಡಿದ್ದೇವೆ. ಮತ್ತೊಂದು ಸಭೆ ಕರೆದು ಸರ್ಕಾರದ ಕ್ರಮಗಳ ಕುರಿತು ಸ್ವಾಮಿಜಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇಂದಿನ ಸಮಾವೇಶದಲ್ಲೂ ಈ ವಿಚಾರ ಹೇಳುತ್ತೇವೆ. ಸರ್ಕಾರ ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮನವರಿಕೆ ಮಾಡುವ ಮೂಲಕ ಮಾತುಕತೆಗೆ ಬನ್ನಿ ಎಂದು ಸ್ವಾಮೀಜಿಗಳನ್ನು ಆಹ್ವಾನಿಸುತ್ತೇವೆ. ಸಿಎಂ ಯಡಿಯೂರಪ್ಪ ಇದೇ ಮಾತನ್ನು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮಾತುಕತೆ ಮೂಲಕ ನಡೆಸಬೇಕಾದ ಪ್ರಕ್ರಿಯೆ ಕುರಿತು ಚರ್ಚೆ ಮಾಡೋಣ ಎಂಬುದು ಸಿಎಂ ನಿಲುವು ಎಂದು ಬೊಮ್ಮಾಯಿ ಹೇಳಿದರು.