ಬೆಂಗಳೂರುದಲ್ಲಿ ಜನಗಣತಿ-2027 ಪ್ರಕ್ರಿಯೆಯಲ್ಲಿ ಭಾಗಿಯಾದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್
ಬೆಂಗಳೂರು, ಮೇ 7: ರಾಷ್ಟ್ರೀಯ ಜನಗಣತಿ-2027ರ ಮೊದಲ ಹಂತದ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಏಪ್ರಿಲ್ 16, 2026ರಿಂದ ಮನೆ ಪಟ್ಟಿ ಹಾಗೂ ವಸತಿ ಗಣತಿ ಕಾರ್ಯಾಚರಣೆ ಆರಂಭಗೊಂಡಿದ್ದು, ವಿವಿಧ ಪ್ರದೇಶಗಳಲ್ಲಿ ಜನಗಣತಿ ಪ್ರಕ್ರಿಯೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ನೇತೃತ್ವದ ತಂಡ ಇಂದು ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಜನಗಣತಿ ಕಾರ್ಯವನ್ನು ನೆರವೇರಿಸಿತು.
ಈ ಸಂದರ್ಭದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಗಣತಿದಾರರಿಗೆ ಅಗತ್ಯ ಮಾಹಿತಿಯನ್ನು ನೀಡಿ ಜನಗಣತಿ ಕಾರ್ಯಕ್ಕೆ ಸಹಕರಿಸಿದರು.
ಜನಗಣತಿ-2027 ಕಾರ್ಯದಲ್ಲಿ ರಾಜ್ಯದ ಎಲ್ಲಾ ನಾಗರಿಕರು ಸಕ್ರಿಯವಾಗಿ ಭಾಗವಹಿಸಿ, ಗಣತಿದಾರರಿಗೆ ನಿಖರ ಮಾಹಿತಿಯನ್ನು ನೀಡುವ ಮೂಲಕ ಜನಗಣತಿ ಯಶಸ್ವಿಗೊಳಿಸಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ಇದೇ ವೇಳೆ ಜನಗಣತಿ ಕಾರ್ಯವನ್ನು ನಿಗದಿತ ಅವಧಿಯೊಳಗೆ ನಿಖರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತ ಹೇಮಂತ್ ಶರಣ್, ಗಣತಿದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
