ನವದೆಹಲಿ:
ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯ ನಂ.6 ಕೃಷ್ಣ ಮೆನನ್ ಮಾರ್ಗದಲ್ಲಿನ ನಿವಾಸದಲ್ಲಿ ಕರ್ನಾಟಕ ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ದಿನಾಂಕ 25/09/2021ರ ಶನಿವಾರ ಸಂಜೆ 7 ಗಂಟೆಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.
ಭೇಟಿ ಸಂದರ್ಭದಲ್ಲಿ ನವೆಂಬರ್ ಅಥವಾ ಡಿಸೆಂಬರ್ 2021ರಲ್ಲಿ ರಾಜ್ಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಕರ್ನಾಟಕ ರಾಜ್ಯ ಮಟ್ಟದ ಸಹಕಾರ ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.
Also Read: Karnataka govt invites Amit Shah to grace state-level cooperative conference to be held in Nov-Dec
‘ಸಹಕಾರ್ ಸೇ ಸಮೃದ್ಧಿ’ ಧ್ಯೇಯಘೋಷದೊಂದಿಗೆ ಹಮ್ಮಿಕೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಗೆ ಹೊಸ ರೂಪ ನೀಡುವುದು ಹಾಗೂ ಸಹಕಾರ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಮಿತ್ ಶಾ ಅವರಿಗೆ ತಿಳಿಸಿದರು.
ಇದೇ ವೇಳೆ ಸಹಕಾರ ಇಲಾಖೆ ಆಧುನೀಕರಣಕ್ಕೆ 5 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಸಚಿವ ಎಸ್.ಟಿ.ಸೋಮಶೇಖರ್ ಅವರ ಮನವಿಗೆ ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಭೇಟಿ ಸಂದರ್ಭದಲ್ಲಿ ಕರ್ನಾಟಕ ಸೌಹಾರ್ದ ಒಕ್ಕೂಟದ ಅಧ್ಯಕ್ಷರಾದ ಕೃಷ್ಣರೆಡ್ಡಿ, ಸಹಕಾರ ಭಾರತೀಯ ರಾಷ್ಟ್ರೀಯ ಅಧ್ಯಕ್ಷರಾದ ರಮೇಶ್ ವೈದ್ಯ, ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಸಿ.ಪಿ.ಉಮೇಶ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇನ್ನಿತರೆ ಸಹಕಾರಿ ಧುರೀಣರು ಉಪಸ್ಥಿತರಿದ್ದರು.