ಅನುಮತಿಯಿಲ್ಲದೆ ಖಾಸಗಿ ಫೋಟೋ, ವಿಡಿಯೋ ಪ್ರಸಾರಕ್ಕೆ ಕಡ್ಡಾಯ FIR; ದೂರು ಸ್ವೀಕರಿಸದ ಪೊಲೀಸರ ವಿರುದ್ಧವೂ ಕ್ರಮ: ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜೂ. 26: ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಖಾಸಗಿ ಅಥವಾ ಆಪ್ತ ಫೋಟೋ ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡುವ ಪ್ರಕರಣಗಳಲ್ಲಿ ತಕ್ಷಣ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಬೇಕು. ದೂರು ದಾಖಲಿಸಲು ವಿಳಂಬ ಮಾಡುವ ಅಥವಾ ನಿರಾಕರಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಅಪರಾಧ, ಬ್ಲ್ಯಾಕ್ಮೇಲ್, ಸೆಕ್ಟೋರ್ಷನ್ ಹಾಗೂ ರಿವೆಂಜ್ ಪೋರ್ನೋಗ್ರಫಿ ಪ್ರಕರಣಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ ಏಕರೂಪದ ಅನುಷ್ಠಾನಕ್ಕಾಗಿ ಪೊಲೀಸ್ ಮಹಾನಿರ್ದೇಶಕರು “ಸ್ಥಾಯಿ ಆದೇಶ 1061″ರ ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದರೆ ಪ್ರಸಾರಕ್ಕೂ ಒಪ್ಪಿಗೆ ಎಂದಲ್ಲ
ಹೊಸ ಮಾರ್ಗಸೂಚಿಗಳ ಪ್ರಕಾರ, ಒಬ್ಬ ವ್ಯಕ್ತಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೂ, ಅದನ್ನು ಇತರರಿಗೆ ಹಂಚಲು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲು ಪ್ರತ್ಯೇಕ ಒಪ್ಪಿಗೆ ಇಲ್ಲದಿದ್ದರೆ ಅದು ಸಂಜ್ಞೇಯ ಅಪರಾಧವಾಗುತ್ತದೆ.
ಭಾರತೀಯ ನ್ಯಾಯ ಸಂಹಿತೆ (BNS), 2023 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಅಡಿಯಲ್ಲಿ ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕಾನೂನುಗಳು ಲಿಂಗ ತಟಸ್ಥವಾಗಿವೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ತಕ್ಷಣ FIR, ಅಗತ್ಯವಿದ್ದರೆ Zero FIR
ರಿವೆಂಜ್ ಪೋರ್ನೋಗ್ರಫಿ, ಸೆಕ್ಟೋರ್ಷನ್, ಬ್ಲ್ಯಾಕ್ಮೇಲ್ ವಿಡಿಯೋಗಳು ಸೇರಿದಂತೆ ಖಾಸಗಿ ಚಿತ್ರ ಅಥವಾ ವಿಡಿಯೋ ದುರ್ಬಳಕೆಗೆ ಸಂಬಂಧಿಸಿದ ಯಾವುದೇ ದೂರು ಬಂದ ಕೂಡಲೇ ಪೊಲೀಸರು ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಬೇಕು.
“ಸಂತ್ರಸ್ತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು” ಎಂಬ ಕಾರಣ ನೀಡಿ ದೂರು ದಾಖಲಿಸಲು ನಿರಾಕರಿಸಬಾರದು ಅಥವಾ ವಿಳಂಬ ಮಾಡಬಾರದು ಎಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.
ಅಪರಾಧ ಬೇರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರೂ ಕೂಡ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಪ್ರಕಾರ ಮೊದಲು ಜೀರೋ ಎಫ್ಐಆರ್ ದಾಖಲಿಸಿ ನಂತರ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ.
ಕಠಿಣ ಕಾನೂನು ಕ್ರಮ
ಪ್ರಕರಣದ ವಾಸ್ತವಾಂಶಗಳ ಆಧಾರದ ಮೇಲೆ ದೂರುದಾರರು ಉಲ್ಲೇಖಿಸದಿದ್ದರೂ ಸಂಬಂಧಿತ ಕಠಿಣ ಕಾನೂನು ಸೆಕ್ಷನ್ಗಳನ್ನು ಪೊಲೀಸರು ಎಫ್ಐಆರ್ನಲ್ಲಿ ಸೇರಿಸಬೇಕು ಎಂದು ಸೂಚಿಸಲಾಗಿದೆ.
ಅವುಗಳಲ್ಲಿ ಪ್ರಮುಖವಾಗಿ:
- ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 77 (Voyeurism): ಮಹಿಳೆಯ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸುವುದು ಅಥವಾ ಪ್ರಸಾರ ಮಾಡುವ ಅಪರಾಧಕ್ಕೆ ಮೊದಲ ಬಾರಿ 1 ರಿಂದ 3 ವರ್ಷ, ಮರು ಅಪರಾಧಕ್ಕೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ.
- ಐಟಿ ಕಾಯ್ದೆ, 2000ರ ಸೆಕ್ಷನ್ 66E: ಅನುಮತಿಯಿಲ್ಲದೆ ಖಾಸಗಿ ಅಂಗಗಳ ಚಿತ್ರಗಳನ್ನು ಸೆರೆಹಿಡಿಯುವುದು ಅಥವಾ ಪ್ರಸಾರ ಮಾಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಅಥವಾ ₹2 ಲಕ್ಷದವರೆಗೆ ದಂಡ.
- ಐಟಿ ಕಾಯ್ದೆಯ ಸೆಕ್ಷನ್ 67 ಹಾಗೂ 67A: ಅಶ್ಲೀಲ ಅಥವಾ ಲೈಂಗಿಕ ವಿಷಯವನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡಿದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹5 ಲಕ್ಷದಿಂದ ₹10 ಲಕ್ಷದವರೆಗೆ ದಂಡ ವಿಧಿಸುವ ಅವಕಾಶ.
ಆನ್ಲೈನ್ ಕಂಟೆಂಟ್ ತೆರವು, ಡಿಜಿಟಲ್ ಸಾಕ್ಷ್ಯ ಸಂರಕ್ಷಣೆ
ಐಟಿ ನಿಯಮಗಳು, 2021ರ ಅನ್ವಯ ಸಾಮಾಜಿಕ ಜಾಲತಾಣಗಳು ಹಾಗೂ ಮಧ್ಯವರ್ತಿ ಸಂಸ್ಥೆಗಳಿಗೆ ತಕ್ಷಣ ನೋಟಿಸ್ ನೀಡಿ ಆಕ್ಷೇಪಾರ್ಹ ಕಂಟೆಂಟ್ ತೆಗೆದುಹಾಕಲು ಅಥವಾ ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸುವುದಕ್ಕೂ ಸೂಚನೆ ನೀಡಲಾಗಿದೆ.
ಸಂತ್ರಸ್ತರ ಗೌಪ್ಯತೆಗೆ ಆದ್ಯತೆ
ಸಂತ್ರಸ್ತರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಬೇಕು. ದೂರುದಾರರೊಂದಿಗೆ ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು. ಸಾಧ್ಯವಾದಷ್ಟು ಮಹಿಳಾ ಸಂತ್ರಸ್ತರ ದೂರುಗಳನ್ನು ಮಹಿಳಾ ಪೊಲೀಸ್ ಅಧಿಕಾರಿಯೇ ದಾಖಲಿಸಬೇಕು ಹಾಗೂ ತಾಂತ್ರಿಕ ತನಿಖೆಗಾಗಿ ಸಿಐಡಿ ಸೈಬರ್ ವಿಭಾಗದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
‘ಖಾಸಗಿತನದ ಹಕ್ಕು ಮೂಲಭೂತ ಹಕ್ಕು’
ಭಾರತ ಸಂವಿಧಾನದ 21ನೇ ವಿಧಿಯಡಿ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ತೀರ್ಪಿನ ಮೂಲಕ ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿ ಮಾನ್ಯತೆ ಪಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
“ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲು ನಿರಾಕರಿಸುವುದು ಅಥವಾ ‘ಪೂರ್ವ ಒಪ್ಪಿಗೆ’ ಎಂಬ ತಪ್ಪು ಕಾರಣ ನೀಡಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಗಂಭೀರ ಶಿಸ್ತು ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ವಲಯ ಐಜಿಪಿಗಳು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್ಪಿ) ಈ ಮಾರ್ಗಸೂಚಿಗಳನ್ನು ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.