ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಬಾಗಿಲು ಮುಚ್ಚದ ಘಟನೆಗೆ ಕಾರಣ ಪತ್ತೆ; ಪ್ರಯಾಣಿಕರ ಮೆಟಲ್ ಚೈನ್ ಸಿಲುಕಿದ್ದೇ ವಿಳಂಬಕ್ಕೆ ಕಾರಣ: ಬಿಎಂಆರ್ಸಿಎಲ್
ಬೆಂಗಳೂರು, ಜೂ. 26: ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಸಂಜೆ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಹಿನ್ನೆಲೆಯಲ್ಲಿ ಉಂಟಾದ ತಾತ್ಕಾಲಿಕ ಸೇವಾ ವ್ಯತ್ಯಯಕ್ಕೆ ಕಾರಣ ಪತ್ತೆಯಾಗಿದ್ದು, ಪ್ರಯಾಣಿಕರೊಬ್ಬರ ಮೆಟಲ್ ಚೈನ್ ರೈಲಿನ ಬಾಗಿಲಿನ ಡೋರ್ ಗೈಡ್ವೇನಲ್ಲಿ ಸಿಲುಕಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.
ಬಿಎಂಆರ್ಸಿಎಲ್ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆ ಪ್ರಕಾರ, ಗುರುವಾರ ಸಂಜೆ 7.36ರಿಂದ 7.54 ಗಂಟೆಯವರೆಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಕಾರಣ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು.
ಘಟನೆಯ ಬಳಿಕ ಕಾರ್ಯಾಚರಣೆ ಹಾಗೂ ನಿರ್ವಹಣಾ ತಂಡಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಪ್ರಯಾಣಿಕರೊಬ್ಬರ ಮೆಟಲ್ ಚೈನ್ ರೈಲಿನ ಬಾಗಿಲಿನ ಡೋರ್ ಗೈಡ್ವೇನಲ್ಲಿ ಸಿಲುಕಿಕೊಂಡಿದ್ದರಿಂದ ಬಾಗಿಲು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗದೆ ಕಾರ್ಯಾಚರಣೆಯಲ್ಲಿ ವಿಳಂಬ ಉಂಟಾಗಿದೆ ಎಂಬುದು ಪತ್ತೆಯಾಗಿದೆ.
ಘಟನೆಯ ನಂತರ ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯ ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಲಾಗಿದ್ದು, ರೈಲು ಅಥವಾ ಅದರ ಬಾಗಿಲಿನ ವ್ಯವಸ್ಥೆಯಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
ಘಟನೆಗೆ ತಕ್ಷಣ ಕಾರ್ಯಾಚರಣೆ ತಂಡಗಳು ಸ್ಪಂದಿಸಿದ್ದು, ಬಳಿಕ ಮೆಟ್ರೋ ಸೇವೆಯನ್ನು ಸಾಮಾನ್ಯ ಸ್ಥಿತಿಗೆ ತರಲಾಗಿದೆ ಎಂದು ನಿಗಮ ತಿಳಿಸಿದೆ.
ಪ್ರಯಾಣಿಕರ ಸುರಕ್ಷತೆಯೇ ನಮ್ಮ ಅತ್ಯುನ್ನತ ಆದ್ಯತೆ. ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಿರಂತರ ಮೆಟ್ರೋ ಸೇವೆಗಳನ್ನು ಒದಗಿಸುವ ಬದ್ಧತೆಯನ್ನು ಬಿಎಂಆರ್ಸಿಎಲ್ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.