“ರೈತರು ಸ್ವಇಚ್ಛೆಯಿಂದ ಭೂಮಿ ಕೊಟ್ಟರೆ ಆಕ್ಷೇಪವಿಲ್ಲ; ಬಲವಂತದ ಭೂಸ್ವಾಧೀನ ಸಹಿಸುವುದಿಲ್ಲ”: ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಜೂ. 26: ಬಿಡದಿ ಟೌನ್ಶಿಪ್ ಯೋಜನೆಗಾಗಿ ರೈತರು ಸ್ವಇಚ್ಛೆಯಿಂದ ಭೂಮಿ ನೀಡಿದರೆ ಯಾವುದೇ ಆಕ್ಷೇಪವಿಲ್ಲ. ಆದರೆ ಒತ್ತಡ, ಬೆದರಿಕೆ ಅಥವಾ ಬಲವಂತದ ಮೂಲಕ ಭೂಸ್ವಾಧೀನಕ್ಕೆ ಮುಂದಾದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 27ರಂದು ತಾವು ಬೈರಮಂಗಲದಲ್ಲಿ ಇರಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಲ್ಲಿಗೆ ಬಂದು ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಲಿ ಎಂದು ಮತ್ತೊಮ್ಮೆ ಆಹ್ವಾನಿಸಿದರು.
ಮುಖ್ಯಮಂತ್ರಿಯವರೊಂದಿಗೆ ಪತ್ರ ವ್ಯವಹಾರ ನಡೆಯುತ್ತಿದೆ ಎಂಬ ಸುದ್ದಿಗಳನ್ನು ತಳ್ಳಿಹಾಕಿದ ಕುಮಾರಸ್ವಾಮಿ, ಇಂತಹ ಮಹತ್ವದ ವಿಷಯಗಳ ಬಗ್ಗೆ ವಿಧಾನಸೌಧದಲ್ಲಿ ಅಲ್ಲ, ರೈತರ ಮಧ್ಯೆ ಕುಳಿತು ಚರ್ಚಿಸಿದರೆ ಮಾತ್ರ ಅರ್ಥಪೂರ್ಣ ಪರಿಹಾರ ಸಾಧ್ಯ ಎಂದು ಹೇಳಿದರು.
“ಜೂನ್ 27ರಂದು ನಾನು ಬೈರಮಂಗಲದಲ್ಲಿ ಇರುತ್ತೇನೆ ಎಂದು ಈಗಾಗಲೇ ಮುಖ್ಯಮಂತ್ರಿಗೆ ತಿಳಿಸಿದ್ದೇನೆ. ನಾನು ಕೊಟ್ಟ ಮಾತಿನಂತೆ ಅಲ್ಲಿಯೇ ಇರುತ್ತೇನೆ. ಅವರು ಬಂದರೆ ಸಂತೋಷದಿಂದ ಕುಳಿತು ಚರ್ಚೆ ಮಾಡುತ್ತೇನೆ,” ಎಂದು ಹೇಳಿದರು.
ಶನಿವಾರ ಮಧ್ಯಾಹ್ನದವರೆಗೂ ಬೈರಮಂಗಲದಲ್ಲೇ ಉಳಿದು ಮುಖ್ಯಮಂತ್ರಿಯವರ ಪ್ರತಿಕ್ರಿಯೆಗಾಗಿ ಕಾಯುವುದಾಗಿ ತಿಳಿಸಿದ ಅವರು, ತಮ್ಮ ಭೇಟಿ ಯಾವುದೇ ಸಂಘರ್ಷ ಅಥವಾ ಗಲಾಟೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
“ನಾವು ಅಲ್ಲಿ ಹೋಗುತ್ತಿರುವುದು ಗಲಾಟೆ ಮಾಡಲು ಅಲ್ಲ. ತಮ್ಮ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರ ಪರವಾಗಿ ನಿಲ್ಲಲು ಮಾತ್ರ ಹೋಗುತ್ತಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದೇನೆ. ಮುಖ್ಯಮಂತ್ರಿಯವರೂ ಬಂದರೆ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬಹುದು,” ಎಂದು ಹೇಳಿದರು.
ಕೆಲವು ರೈತರು ಭೂಮಿ ನೀಡಲು ಸಿದ್ಧರಾಗಿದ್ದಾರೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸ್ವಇಚ್ಛೆಯಿಂದ ಭೂಮಿ ನೀಡುವವರ ವಿರುದ್ಧ ತಮಗೆ ಯಾವುದೇ ವಿರೋಧ ಇಲ್ಲ ಎಂದರು.
“ರೈತರು ಸಂತೋಷದಿಂದ, ಸ್ವಇಚ್ಛೆಯಿಂದ ಭೂಮಿ ಕೊಟ್ಟರೆ ನನಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಒತ್ತಡ, ಬೆದರಿಕೆ ಅಥವಾ ದಾದಾಗಿರಿ ಮೂಲಕ ಭೂಮಿ ಕಸಿದುಕೊಳ್ಳಲು ಯತ್ನಿಸಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಬಿಡದಿ ಟೌನ್ಶಿಪ್ ಪ್ರಸ್ತಾವನೆ ಮೊದಲು ಬಂದಾಗ ರೈತರನ್ನು ‘ಕೃಷ್ಣ’ ನಿವಾಸಕ್ಕೆ ಆಹ್ವಾನಿಸಿ ಮುಕ್ತ ಚರ್ಚೆ ನಡೆಸಿದ್ದೆ ಎಂದು ಹೇಳಿದರು.
ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ಕೂಡ ರೈತರ ಪರವಾಗಿ ನಿಂತು ಈ ಯೋಜನೆಯನ್ನು ವಿರೋಧಿಸಿದ್ದರು ಎಂದು ಅವರು ಹೇಳಿದರು.
“ನಾನು ರೈತರಿಗಾಗಿ ಮಾತ್ರ ಬೈರಮಂಗಲಕ್ಕೆ ಹೋಗುತ್ತಿದ್ದೇನೆ. ರೈತರ ಪ್ರತಿಭಟನೆ ಶಾಂತಿಯುತ ಹಾಗೂ ಕಾನೂನುಬದ್ಧವಾಗಿದೆ. ನನ್ನ ಭೇಟಿಯೂ ಅದೇ ರೀತಿಯದ್ದಾಗಿರುತ್ತದೆ. ಅವರ ಅಹವಾಲುಗಳನ್ನು ಆಲಿಸುತ್ತೇನೆ. ಮುಖ್ಯಮಂತ್ರಿಯವರು ಬಂದರೆ ಎಲ್ಲರಿಗೂ ಒಪ್ಪುವಂತಹ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ,” ಎಂದು ಹೇಳಿದರು.
ಬೈರಮಂಗಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಾಗುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ತಾವು ಅಥವಾ ರೈತರು ಕಾನೂನು ಸುವ್ಯವಸ್ಥೆ ಹದಗೆಡಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದರು.
ಕೆಲವರು ಭೂಮಿ ನೀಡಲು ಸಮ್ಮತಿಸಿರಬಹುದು. ಆದರೆ ಬಹುಸಂಖ್ಯೆಯ ರೈತರು ಭೂಸ್ವಾಧೀನವನ್ನು ವಿರೋಧಿಸುತ್ತಿದ್ದು, ಅವರ ಅಭಿಪ್ರಾಯವನ್ನು ನಿರ್ಲಕ್ಷಿಸಿ ಯೋಜನೆಯನ್ನು ಮುಂದುವರಿಸುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.
‘ಇದು ಡಾ. ಅಂಬೇಡ್ಕರ್ ಭಾವಚಿತ್ರವಿರುವ ಸಾಮಾನ್ಯ HMT ವಾಚ್’
ತಾವು ದುಬಾರಿ ವಾಚ್ ಧರಿಸುತ್ತಾರೆ ಎಂಬ ಆಡಳಿತ ಪಕ್ಷದ ಕೆಲ ಶಾಸಕರ ಟೀಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಮ್ಮ ಕೈಯಲ್ಲಿದ್ದ ವಾಚ್ ತೋರಿಸಿ ಮಾತನಾಡಿದರು.
“ನಾನು ದುಬಾರಿ ಐಷಾರಾಮಿ ವಾಚ್ ಧರಿಸುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಸಾಮಾನ್ಯ HMT ವಾಚ್,” ಎಂದು ಹೇಳಿದರು.
ರಾಜ್ಯ ಸರ್ಕಾರದ ಮೇಲೆ ವ್ಯಂಗ್ಯವಾಡಿದ ಅವರು, “ಈ ಸರ್ಕಾರ ಎಲ್ಲ ವಿಷಯಕ್ಕೂ ಎಸ್ಐಟಿ ರಚಿಸುತ್ತದೆ. ಬೇಕಿದ್ದರೆ ನನ್ನ ವಾಚ್ ಬಗ್ಗೆ ತನಿಖೆ ನಡೆಸಲೂ ಒಂದು ಎಸ್ಐಟಿ ರಚಿಸಬಹುದು,” ಎಂದು ಚಟಾಕಿ ಹಾರಿಸಿದರು.
