ನವೆಂಬರ್ ಪಡಿತರ ವಿತರಣೆಯ ತೊಂದರೆಗಳ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನವೆಂಬರ್ 26ರ ಟಿಪ್ಪಣಿಯ ಮೊದಲ ಪುಟ. ಚಿತ್ರ: ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಬೆಂಗಳೂರು: ಅಹಾರ ತಂತ್ರಾಂಶ, ಡೇಟಾಬೇಸ್ ಸರ್ವರ್ ಮತ್ತು ಬಯೋಮೆಟ್ರಿಕ್ ಸಾಧನಗಳಲ್ಲಿನ ತೊಂದರೆಗಳಿಂದ ನವೆಂಬರ್ 24 ಮತ್ತು 25ರಂದು ರಾಜ್ಯದಾದ್ಯಂತ ಪಡಿತರ ವಿತರಣೆಗೆ ಗಣನೀಯ ಅಡ್ಡಿಯಾಗಿತ್ತು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನವೆಂಬರ್ 26ರ ಟಿಪ್ಪಣಿಯಲ್ಲಿ ತಿಳಿಸಿದೆ. ನವೆಂಬರ್ 25ರ ವೇಳೆಗೆ ತಿಂಗಳ ಪಡಿತರದ ಶೇ.52.80ರಷ್ಟು ವಿತರಣೆ ಪೂರ್ಣಗೊಂಡಿತ್ತು ಎಂದು ಅದು ಹೇಳಿದೆ.
ನವೆಂಬರ್ ತಿಂಗಳಿಗೆ ಒಟ್ಟು 1,24,84,866 ಅರ್ಹ ಎನ್‌ಎಫ್‌ಎಸ್‌ಎ ಹಾಗೂ ರಾಜ್ಯ ಪಡಿತರ ಚೀಟಿಗಳಿಗೆ (ಅಂತ್ಯೋದಯ ಮತ್ತು ಆದ್ಯತಾ ಕುಟುಂಬ) ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ನವೆಂಬರ್ 23ರಂದು ಅಹಾರ ತಂತ್ರಾಂಶ ನಿಧಾನವಾಗಿರುವುದನ್ನು ಜಿಲ್ಲಾ ಅಧಿಕಾರಿಗಳು ವರದಿ ಮಾಡಿದ್ದು, ಇದರಿಂದ ವಿತರಣೆ ವಹಿವಾಟುಗಳು ವಿಳಂಬವಾದವು. ಇಲಾಖೆ ಈ ವಿಷಯವನ್ನು ರಾಜ್ಯ ಎನ್‌ಐಸಿ ತಂತ್ರಾಂಶ ತಂಡದ ಗಮನಕ್ಕೆ ತಂದಿತು. ದೈನಂದಿನ ವಿತರಣೆ ಅವಧಿಯ ನಂತರ ಡೇಟಾಬೇಸ್ ನಿರ್ವಹಣೆ (ಮಿಸ್ಸಿಂಗ್ ಇಂಡೆಕ್ಸ್, ಇಂಡೆಕ್ಸ್ ರೀಬಿಲ್ಡ್, ಅಪ್‌ಡೇಟ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಡಿಬಿಸಿಸಿ ಕಮಾಂಡ್) ನಡೆಸುವಂತೆ ಎನ್‌ಐಸಿ ಸಲಹೆ ನೀಡಿತು.
ಕೆಎಸ್‌ಡಿಸಿ ನಡೆಸಿದ ನಿರ್ವಹಣೆ ಸಮಯದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಡೇಟಾಬೇಸ್ ಸರ್ವರ್‌ಗಳ ನಡುವಿನ ಎಒಎಜಿ ಡೇಟಾ ಸಿಂಕ್ರೊನೈಸೇಶನ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು, ನವೆಂಬರ್ 24ರಂದು ವಿತರಣೆಗೆ ಅಡ್ಡಿಯಾಯಿತು. ಅದೇ ದಿನ ಬೆಂಗಳೂರು ಮತ್ತು ಕಲಬುರಗಿ ಸರ್ವರ್‌ಗಳಲ್ಲಿ ಸಂಜೆ 5 ಗಂಟೆಗೆ ಹಾಗೂ ಮೈಸೂರು ಸರ್ವರ್‌ನಲ್ಲಿ ರಾತ್ರಿ 9.45ಕ್ಕೆ ಸಮಸ್ಯೆ ಬಗೆಹರಿಸಲಾಯಿತು ಎಂದು ಇಲಾಖೆ ತಿಳಿಸಿದೆ.
ನವೆಂಬರ್ 24ರಂದೇ ಬಯೋಮೆಟ್ರಿಕ್ ಸಾಧನ ಪೂರೈಕೆದಾರ ಮೆ. ಮಂತ್ರ ಸಾಫ್ಟ್‌ಟೆಕ್ (ಇಂಡಿಯಾ) ಪ್ರೈ. ಲಿ. ಸಂಸ್ಥೆಯು, ಎಂಎಫ್‌ಎಸ್110ಎಲ್1 ಸಾಧನಕ್ಕೆ ಆರ್‌ಡಿ ಸರ್ವಿಸ್ 1.5.2 ಆವೃತ್ತಿಯನ್ನು ಯುಐಡಿಎಐ ನಿರ್ದೇಶನದಂತೆ ಭದ್ರತೆಯ ಕಾರಣಕ್ಕೆ ವಿಂಡೋಸ್‌ನಲ್ಲಿ ಚಲಿಸುವ ಎಲ್ಲಾ ಬಯೋಮೆಟ್ರಿಕ್ ಸಾಧನಗಳಲ್ಲಿ ತಕ್ಷಣ ಅಪ್‌ಡೇಟ್ ಮಾಡಬೇಕು, ಇಲ್ಲದಿದ್ದರೆ ಸಾಧನಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಇಲಾಖೆಗೆ ತಿಳಿಸಿತು. ಅದರಂತೆ ಎಲ್ಲಾ ಜಿಲ್ಲೆಗಳಿಗೆ ನ್ಯಾಯಬೆಲೆ ಅಂಗಡಿಗಳ ಬಯೋಮೆಟ್ರಿಕ್ ಸಾಧನಗಳಲ್ಲಿ ಆರ್‌ಡಿ ಸರ್ವಿಸ್ ಅಪ್‌ಡೇಟ್ ಮಾಡುವಂತೆ ಇಲಾಖೆ ಸೂಚಿಸಿತು.
ಅಪ್‌ಡೇಟ್ ನಂತರ ರಾಜ್ಯದ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಸಾಧನಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದು, ನವೆಂಬರ್ 25ರಂದು ಫಲಾನುಭವಿಗಳ ದೃಢೀಕರಣ ಮತ್ತು ವಿತರಣೆಗೆ ಅಡ್ಡಿಯಾಯಿತು. ಇಲಾಖೆ ಈ ವಿಷಯವನ್ನು ಪೂರೈಕೆದಾರರ ಗಮನಕ್ಕೆ ತಂದಿದ್ದು, ನವೆಂಬರ್ 25ರಂದು ಸಂಜೆ 5.30ಕ್ಕೆ ಸಮಸ್ಯೆ ಬಗೆಹರಿಸಲಾಯಿತು.
ಅಹಾರ ತಂತ್ರಾಂಶ ಈಗ ಸ್ಥಿರವಾಗಿದ್ದು, ರಾಜ್ಯದಾದ್ಯಂತ ವಿತರಣೆ ಸುಗಮವಾಗಿ ನಡೆಯುತ್ತಿದೆ ಎಂದು ಇಲಾಖೆ ತಿಳಿಸಿದೆ. ನವೆಂಬರ್ ತಿಂಗಳ ವಿತರಣೆ ಪೂರ್ಣಗೊಳಿಸಲು ನ.25ರಿಂದ ಜಾರಿಗೆ ಬರುವಂತೆ ವಿತರಣೆ ಸಮಯವನ್ನು ಬೆಳಿಗ್ಗೆ 6ರಿಂದ ರಾತ್ರಿ 10ರ ಬದಲು ಬೆಳಿಗ್ಗೆ 6ರಿಂದ ರಾತ್ರಿ 11.59ರವರೆಗೆ ಪರಿಷ್ಕರಿಸಲಾಗಿದೆ. ಇಲಾಖೆಯ ಐಟಿ ತಂಡ, ಎನ್‌ಐಸಿ ಮತ್ತು ಕೆಎಸ್‌ಡಿಸಿ ಅಧಿಕಾರಿಗಳು ಅಹಾರ ತಂತ್ರಾಂಶ ಹಾಗೂ ಸಂಬಂಧಿತ ಸೇವೆಗಳ ಮೇಲೆ ನಿರಂತರ ನಿಗಾ ವಹಿಸಿದ್ದಾರೆ.
