ಬೆಂಗಳೂರು: ಕರ್ನಾಟಕ ಸರ್ಕಾರ ಫಿನ್ಲೆಂಡ್ನ ಬ್ಯುಸಿನೆಸ್ ಟ್ಯಾಂಪೆರೆ ಜತೆ ಒಪ್ಪಂದ ಪತ್ರಕ್ಕೆ (ಎಲ್ಒಐ) ಸಹಿ ಹಾಕಿದ್ದು, ಕರ್ನಾಟಕ ಮತ್ತು ಟ್ಯಾಂಪೆರೆ ಪ್ರದೇಶದ ನಡುವೆ ಆನಿಮೇಷನ್, ದೃಶ್ಯ ಪರಿಣಾಮ (ವಿಎಫ್ಎಕ್ಸ್), ಗೇಮಿಂಗ್, ಡಿಜಿಟಲ್ ಚಲನಚಿತ್ರ ಮತ್ತು ಇಮ್ಮರ್ಸಿವ್ ತಂತ್ರಜ್ಞಾನಗಳನ್ನು ಒಳಗೊಂಡ ಕ್ರಿಯೇಟಿವ್ ಕಾರಿಡಾರ್ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಪ್ರಕಟಣೆ ತಿಳಿಸಿದೆ. ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (ಜಿಐಎ) ಉಪಕ್ರಮದಡಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ಈ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.
ಸಹಿ ಸಮಯದಲ್ಲಿ ಉಪಸ್ಥಿತರಿದ್ದವರು
ಫಿನ್ಲೆಂಡ್ನ ಗೌರವ ಕಾನ್ಸುಲ್ ಗೀತಾಂಜಲಿ ಕಿರ್ಲೋಸ್ಕರ್, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ನಿರ್ದೇಶಕ ಹಾಗೂ ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ (ಐಎಎಸ್), ಫಿನ್ಲೆಂಡ್ನ ಫಿಲ್ಮ್ ಟ್ಯಾಂಪೆರೆಯ ಕಾರ್ಯಕ್ರಮ ನಿರ್ದೇಶಕಿ ಫ್ಯಾನಿ ಹೈನೋನೆನ್ ಹಾಗೂ ಎಬಿಎಐ ಅಧ್ಯಕ್ಷ ಬಿರೇನ್ ಘೋಷ್ ಅವರ ಸಮ್ಮುಖದಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು.
ಕಾರಿಡಾರ್ನ ಉದ್ದೇಶ
- ಇಮ್ಮರ್ಸಿವ್ ಮೀಡಿಯಾ, ಡಿಜಿಟಲ್ ಚಲನಚಿತ್ರ, ವಿಎಫ್ಎಕ್ಸ್, ಆನಿಮೇಷನ್, ಎಆರ್/ವಿಆರ್ ಮತ್ತು ಗೇಮಿಂಗ್ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ವ್ಯವಸ್ಥಿತ ಮಾರ್ಗ ಕಲ್ಪಿಸುವುದು.
- ಕರ್ನಾಟಕ ಮತ್ತು ಟ್ಯಾಂಪೆರೆ ಪ್ರದೇಶದ ಸ್ಟಾರ್ಟ್ಅಪ್, ಉದ್ಯಮ, ಹೂಡಿಕೆದಾರರು, ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳನ್ನು ಬೆಸೆಯುವುದು.
- ಜ್ಞಾನ ವಿನಿಮಯ, ನಾವೀನ್ಯತೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು.
ಈ ಉಪಕ್ರಮವನ್ನು ಕೆ-ಟೆಕ್ ಪಾಲುದಾರ ಎಬಿಎಐ/ಎವಿಜಿಸಿ ಸಿಒಇ ಸಹಯೋಗದಲ್ಲಿ ಮುಂದುವರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಚಿವರ ಹೇಳಿಕೆ
ಗೃಹ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ, “ಕರ್ನಾಟಕದ ನಾವೀನ್ಯತೆ ಪರಿಸರ ಸಾಂಪ್ರದಾಯಿಕ ತಂತ್ರಜ್ಞಾನ ಕ್ಷೇತ್ರಗಳನ್ನು ಮೀರಿ ಬೆಳೆದಿದ್ದು, ಕ್ರಿಯೇಟಿವ್ ತಂತ್ರಜ್ಞಾನ, ಆನಿಮೇಷನ್, ದೃಶ್ಯ ಪರಿಣಾಮ, ಗೇಮಿಂಗ್ ಮತ್ತು ಇಮ್ಮರ್ಸಿವ್ ಮೀಡಿಯಾ ಪ್ರಮುಖ ಅವಕಾಶದ ಕ್ಷೇತ್ರಗಳಾಗಿ ಹೊರಹೊಮ್ಮುತ್ತಿವೆ. ಟ್ಯಾಂಪೆರೆ ಪ್ರದೇಶದ ಜತೆಗಿನ ನಮ್ಮ ಪಾಲುದಾರಿಕೆ ಎರಡು ಪೂರಕ ಪರಿಸರಗಳನ್ನು ಬೆಸೆಯಲು, ಉದ್ಯಮ ಮತ್ತು ಪ್ರತಿಭೆಗೆ ಮಾರ್ಗ ಕಲ್ಪಿಸಲು ಹಾಗೂ ಉದ್ಯಮ, ಶೈಕ್ಷಣಿಕ ಸಂಸ್ಥೆ ಮತ್ತು ಸಂಶೋಧನೆಯಲ್ಲಿ ಸಹಯೋಗ ಬಲಪಡಿಸಲು ಅವಕಾಶ” ಎಂದು ಹೇಳಿದ್ದಾರೆ.
ಕರ್ನಾಟಕ–ಫಿನ್ಲೆಂಡ್ ಸಂಬಂಧ
ತಂತ್ರಜ್ಞಾನ, ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ಕರ್ನಾಟಕ ಮತ್ತು ಫಿನ್ಲೆಂಡ್ 2017ರಲ್ಲಿ ಸ್ಥಾಪಿಸಿದ ಕರ್ನಾಟಕ–ಫಿನ್ಲೆಂಡ್ ನಾವೀನ್ಯತೆ ಕಾರಿಡಾರ್ ಮೂಲಕ ಸಹಕರಿಸುತ್ತಿದ್ದು, ಪ್ರಸ್ತಾವಿತ ಕ್ರಿಯೇಟಿವ್ ಕಾರಿಡಾರ್ ಅದರ ಮುಂದುವರಿಕೆ. ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಕರ್ನಾಟಕವನ್ನು 40ಕ್ಕೂ ಹೆಚ್ಚು ದೇಶಗಳೊಂದಿಗೆ ಬೆಸೆದಿದ್ದು, 2,000ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಿಗೆ ಬೆಂಬಲ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
