Home ಬೆಂಗಳೂರು ನಗರ ಸಾರಿಗೆ ಸಂಸ್ಥೆಗೆ 4 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟ: ಡಿಸಿಎಂ ಲಕ್ಷ್ಮಣ್ ಸವದಿ

ಸಾರಿಗೆ ಸಂಸ್ಥೆಗೆ 4 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟ: ಡಿಸಿಎಂ ಲಕ್ಷ್ಮಣ್ ಸವದಿ

23
0

ಬೆಂಗಳೂರು:

ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, 4 ಸಾವಿರ ಕೋಟಿ ರೂ ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಪರಿಷತ್ ನಲ್ಲಿಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ಕೆ.ಟಿ ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 4 ಸಾರಿಗೆ ನಿಗಮಗಳಿಗೆ 4 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಈ ಪೈಕಿ 2,980 ಕೋಟಿ ರೂ. ನಿವ್ವಳ ಆದಾಯವೇ ನಷ್ಟವಾಗಿದೆ. ಹೀಗಾಗಿ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುವಂತೆ ಆಗಿವೆ ಎಂದು ಹೇಳಿದರು.

ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಹಣಕಾಸಿನ ಇತಿಮಿತಿಯಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ಅನುದಾನ ಬಂದ ನಂತರ, ನಷ್ಟ ಸರಿದೂಗಿಸಲು ಸಹಕಾರಿಯಾಗಲಿದೆ. ಮುಂಗಡ ಪತ್ರದಲ್ಲಿ ಈ ನಷ್ಟ ಸರಿದೂಗಿಸಲು ಹೆಚ್ಚಿನ ಅನುದಾನ ನೀಡುವಂತೆ, ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ವಿವಿಧ ಭಾಗಗಳಿಂದ ಶಾಸಕರು ಹೊಸ ಬಸ್ ಗಳ ಖರೀದಿ, ಬಸ್ ನಿಲ್ದಾಣಗಳ ಆರಂಭ, ಹೊಸ ಬಸ್ ಗಳ ಖರೀದಿ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆದರೆ, ಕೊರೊನಾ ಸೋಂಕಿನ ಆರ್ಥಿಕ ಪರಿಸ್ಥಿತಿಯಿಂದ ಅದು ಸಾಧ್ಯವಾಗುತ್ತಿಲ್ಲ. ಮುಂಗಡ ಪತ್ರ ಮಂಡನೆಯಾದ ನಂತರ ಇದಕ್ಕೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಇರುವಂತೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸ್ಯಾಟ್‌ಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದರೆ, ಅಲ್ಲಿ ಅವರಿಗೆ ಶಾಪಿಂಗ್ ಜೊತೆಗೆ, ಮನರಂಜನೆ ಸಿಗುವಂತೆ, ಚಿತ್ರಮಂದಿರಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಈಗಾಗಲೇ ದಾವಣಗೆರೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಈ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ 551 ಸರ್ಕಾರಿ ಬಸ್ ನಿಲ್ದಾಣಗಳಿದ್ದು, ಈ ನಿಲ್ದಾಣಗಳಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ, ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here