‘ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಿಕ್ಷಣʼ ಕುರಿತ ಪ್ರಾದೇಶಿಕ ಸಂಶೋಧನಾ ವಿಚಾರ ಸಂಕಿರಣ
ಬೆಂಗಳೂರು:
21ನೇ ಶತಮಾನದಲ್ಲಿ ಕರ್ನಾಟಕ ಸೇರಿ ಇಡೀ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷರೂ ಆದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಡೆನ್ಮಾರ್ಕ್ ನ ಅಲ್ಬೋರ್ಗ್ ವಿವಿಯ ಯುನೆಸ್ಕೊ ಸೆಂಟರ್ ಫಾರ್ ಪ್ರಾಬ್ಲಮ್ ಬೇಸ್ಡ್ ಲರ್ನಿಂಗ್ ಇನ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಸಸ್ಟೈನಬಿಲಿಟಿ ಸಹಯೋಗದಲ್ಲಿ ʼಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಲಿಕಾ ಪದ್ಧತಿʼ ಬಗೆಗಿನ ಪ್ರಾದೇಶಿಕ ಸಂಶೋಧನಾ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.
“ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಜಾರಿಗೆ ಬರುತ್ತಿದೆ. ನೂತನ ಶಿಕ್ಷಣ ನೀತಿಯ ಕರಡು ಲಭ್ಯವಾದ ಕೂಡಲೇ ಹಾಗೂ ಕೇಂದ್ರ ಸರಕಾರ ಈ ನೀತಿಯನ್ನು ಪ್ರಕಟಿಸಿದ ಮೊದಲ ದಿನದಿಂದಲೇ ಸರಕಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಿದ್ದನ್ನು ಕಂಡಿದ್ದೇನೆ” ಎಂದು ಕಸ್ತೂರಿರಂಗನ್ ಮೆಚ್ವುಗೆ ವ್ಯಕ್ತಪಡಿಸಿದರು.
ಶಿಕ್ಷಣ ನೀತಿಯ ಬಗ್ಗೆ ರಾಜ್ಯ ಸರಕಾರಕ್ಕೆ ಇರುವ ಬದ್ಧತೆ, ದೂರದೃಷ್ಟಿ ಶ್ಲಾಘನೀಯ. ಡಾ.ಅಶ್ವತ್ಥನಾರಾಯಣ ಅವರು ಹೋಗುತ್ತಿರುವ ವೇಗ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಸ್ತೂರಿ ರಂಗನ್
ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು, “ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡಲು ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ” ಎಂದರು.
ರಾಜ್ಯವು ಉದ್ಯಮಶೀಲತೆ, ಆವಿಷ್ಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಶಿಕ್ಷಣ ನೀತಿಯೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಹುರುಪು ನೀಡಲಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ಶಿಕ್ಷಣ ನೀಡುವ ಮೂಲಕ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಶೀಘ್ರದಲ್ಲೇ ಸಾಕಾರವಾಗಲಿದೆ ಎಂದೇ ಡಿಸಿಎಂ ಹೇಳಿದರು.
ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು, ನನ್ನ ಜೀವಮಾನದಲ್ಲಿ ಸಿಕ್ಕಿದ ಸುವರ್ಣಾವಕಾಶ ಎಂದ ಡಿಸಿಎಂ, ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಲು ನೀತಿಯೂ ಹೆಚ್ಚು ಪರಿಣಾಮಕಾರಿ. ಎಲ್ಲ ಸಮಸ್ಯೆಗಳಿಗೂ ಇದೊಂದೇ ಪರಿಹಾರ ಎಂದರು.
ಯುನೆಸ್ಕೋದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಲಿಕಾ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ.ಅನೆಟ್ ಕೊಲ್ಮಾಸ್ ಅವರು ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಮತ್ತು ಆವಿಷ್ಕಾರ ಶಿಕ್ಷಣಕ್ಕೆ ಯುನೆಸ್ಕೋ ಹೆಚ್ಚು ಒತ್ತು ನೀಡುತ್ತಿದೆ. ಆ ನಿಟ್ಟಿನಲ್ಲಿ ನಾವು ಎಲ್ಲ ದೇಶಗಳ ಜತೆ, ಮುಖ್ಯವಾಗಿ ಭಾರತದ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.
ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಸೇರಿದಂತೆ ದೇಶ- ವಿದೇಶಗಳ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.