ಯುಜಿ ನೀಟ್ ಮೂರನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ಸೀಟು ರದ್ದತಿಗೆ ಅಕ್ಟೋಬರ್ 5ರವರೆಗೆ ಅವಕಾಶ
ಬೆಂಗಳೂರು: ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದೆ. ಕೌನ್ಸೆಲಿಂಗ್ನಿಂದ ಹೊರಬರಲು ಅಥವಾ ಸೀಟು ರದ್ದುಪಡಿಸಿಕೊಳ್ಳಲು ಸಂಬಂಧಿತ ಪ್ರಕ್ರಿಯೆ ಪೂರ್ಣಗೊಳಿಸಲು ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಎಂಸಿಸಿ ಸೀಟಿಗೆ ತೆರಳುವವರಿಗೆ ಚಾಯ್ಸ್-4 ಆಯ್ಕೆ
ಎಂಸಿಸಿ ಮತ್ತು ಕೆಇಎ ಎರಡರಲ್ಲೂ ಸೀಟು ಪಡೆದಿದ್ದು, ಎಂಸಿಸಿಯ ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯೊಳಗೆ ಕೆಇಎ ವೆಬ್ಸೈಟ್ನ ಸಂಬಂಧಿತ ಲಿಂಕ್ನಲ್ಲಿ ಚಾಯ್ಸ್-4 ಆಯ್ಕೆ ಮಾಡಿ ದಂಡವಿಲ್ಲದೆ ಕೆಇಎ ಕೌನ್ಸೆಲಿಂಗ್ನಿಂದ ಹೊರಬರಬಹುದು.
ಕೆಇಎ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಎಂಸಿಸಿಯ ಮೂರನೇ ಸುತ್ತಿನಲ್ಲಿ ಸೀಟು ದೊರೆತಿದ್ದು, ಅಲ್ಲಿಗೆ ಪ್ರವೇಶ ಪಡೆಯಲು ಬಯಸಿದರೆ ₹10,000 ದಂಡ ಪಾವತಿಸಿ ಕೆಇಎ ಸೀಟನ್ನು ರದ್ದುಪಡಿಸಿಕೊಳ್ಳಬಹುದು. ಇದಕ್ಕೂ ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆ ಗಡುವಾಗಿದೆ.
ಕೆಇಎ ಮೂರನೇ ಸುತ್ತಿನ ಸೀಟು ರದ್ದತಿ
ಇತರ ರಾಜ್ಯಗಳ ಮೂರನೇ ಸುತ್ತಿನಲ್ಲಿ ಸೀಟು ಪಡೆದು ಅಲ್ಲಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಹಾಗೂ ಹಂಚಿಕೆಯಾದ ಸೀಟು ಇಷ್ಟವಿಲ್ಲದೆ ಕೌನ್ಸೆಲಿಂಗ್ನಿಂದ ಹೊರಬರಲು ಬಯಸುವವರು ₹10,000 ದಂಡ ಪಾವತಿಸಿ ಕೆಇಎ ಮೂರನೇ ಸುತ್ತಿನ ಸೀಟನ್ನು ರದ್ದುಪಡಿಸಿಕೊಳ್ಳಬಹುದು. ಈ ಪ್ರಕ್ರಿಯೆಗೂ ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶವಿದೆ.
ಕೆಇಎ ಕೌನ್ಸೆಲಿಂಗ್ನಲ್ಲಿ ಉಳಿಯಲು ಇ-ಮೇಲ್ ಸೂಚನೆ
ಎಂಸಿಸಿಯ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿದ್ದು, ಕೆಇಎ ಮೂರನೇ ಸುತ್ತಿನಲ್ಲಿ ದೊರೆತ ಸೀಟಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯೊಳಗೆ ತಮ್ಮ ಪೂರ್ಣ ವಿವರಗಳನ್ನು keauthority_ka@nic.in ವಿಳಾಸಕ್ಕೆ ಇ-ಮೇಲ್ ಮಾಡಬೇಕು. ಅಂತಹ ಅಭ್ಯರ್ಥಿಗಳನ್ನು ಕೆಇಎ ಕೌನ್ಸೆಲಿಂಗ್ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ.
ಸೀಟು ರದ್ದುಪಡಿಸಿಕೊಂಡು ಕೌನ್ಸೆಲಿಂಗ್ನಿಂದ ಹೊರಬಂದ ಅಭ್ಯರ್ಥಿಗಳಿಗೆ ನಂತರದ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ರದ್ದತಿಯಿಂದ ತೆರವಾಗುವ ಸೀಟುಗಳನ್ನು ಇದೇ ಸುತ್ತಿನ ಸೀಟು ಹಂಚಿಕೆಯಲ್ಲಿ ಮತ್ತೆ ಪರಿಗಣಿಸಿ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಈ ಸುತ್ತಿನ ಬಳಿಕ ಚಾಯ್ಸ್-4 ಆಯ್ಕೆಗೆ ಅವಕಾಶ ಇರುವುದಿಲ್ಲ. ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಕೆಇಎ ವೆಬ್ಸೈಟ್ ಪರಿಶೀಲಿಸಬಹುದು ಎಂದು ಅವರು ತಿಳಿಸಿದ್ದಾರೆ.
