ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗೆ ಶೇ.74ರಷ್ಟು ಹಾಜರಿ; ಒಎಂಆರ್ ಪ್ರತಿಗಳ ಅಪ್ಲೋಡ್ ಆರಂಭ
ಬೆಂಗಳೂರು: ಉಳಿಕೆ ಮೂಲ ವೃಂದದ 505 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಲಿಖಿತ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಸುಮಾರು ಶೇ.74ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿದ್ದ 4,11,656 ಅಭ್ಯರ್ಥಿಗಳ ಪೈಕಿ ಬೆಳಗಿನ ಸಾಮಾನ್ಯ ಜ್ಞಾನ ಪತ್ರಿಕೆಯನ್ನು 3,04,096 ಮಂದಿ ಮತ್ತು ಮಧ್ಯಾಹ್ನದ ನಿರ್ದಿಷ್ಟ ಪತ್ರಿಕೆಯನ್ನು 3,03,058 ಮಂದಿ ಬರೆದಿದ್ದಾರೆ. ಎರಡೂ ಪತ್ರಿಕೆಗಳಿಗೆ ಶೇ.74ರಷ್ಟು ಹಾಜರಾತಿ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ 1,037 ಕೇಂದ್ರಗಳಲ್ಲಿ ಪರೀಕ್ಷೆ
ರಾಜ್ಯದ ಒಟ್ಟು 1,037 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ಧಾರವಾಡದಲ್ಲಿ ಅತಿ ಹೆಚ್ಚು, ಅಂದರೆ 60 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬಿಗಿ ನಿಗಾ ವ್ಯವಸ್ಥೆಯಿಂದ ಯಾವುದೇ ತೊಂದರೆ ಎದುರಾಗಲಿಲ್ಲ ಎಂದು ಪ್ರಸನ್ನ ತಿಳಿಸಿದ್ದಾರೆ.
ಒಎಂಆರ್ ಪ್ರತಿಗಳ ಸ್ಕ್ಯಾನಿಂಗ್ ಆರಂಭ
ಪರೀಕ್ಷೆ ಮುಗಿದ ಬಳಿಕ ಒಎಂಆರ್ ಉತ್ತರ ಪತ್ರಿಕೆಗಳು ತಲುಪಿದ ತಕ್ಷಣವೇ ಅವುಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್ಸೈಟ್ಗೆ ಅಪ್ಲೋಡ್ ಮಾಡುವ ಕಾರ್ಯ ಆರಂಭಿಸಲಾಗಿದೆ.
ಕಲಬುರ್ಗಿ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಯಪುರ, ದಾವಣಗೆರೆ ಮತ್ತು ಮೈಸೂರಿನಲ್ಲಿ ಸ್ಕ್ಯಾನಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಸ್ಥಳೀಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಕ್ಯಾನಿಂಗ್ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೆಇಎ ಕಚೇರಿಯಲ್ಲೇ ಈ ಕಾರ್ಯ ನಡೆಯುತ್ತಿದೆ.
ಅಕ್ಟೋಬರ್ 4ರ ಪ್ರಕಟಣೆಯಲ್ಲಿ, ಎಲ್ಲ ಅಭ್ಯರ್ಥಿಗಳ ಒಎಂಆರ್ ಪ್ರತಿಗಳು ಅಕ್ಟೋಬರ್ 5ರ ಸಂಜೆಯ ವೇಳೆಗೆ ಕೆಇಎ ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ ಎಂದು ಪ್ರಸನ್ನ ತಿಳಿಸಿದ್ದಾರೆ.
