ನವೆಂಬರ್ 26ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆ. ಚಿತ್ರ: ಕರ್ನಾಟಕ ವಾರ್ತೆ
ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆ ನಿಯಮ ಉಲ್ಲಂಘಿಸಿದ ಒಂಬತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ಅವರು ದಂಡ ವಿಧಿಸಿ, ಮುಂದೆ ಇಂತಹ ಲೋಪ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 26ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಿಯಮ ಉಲ್ಲಂಘಿಸಿದ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಪುನರ್ವಸತಿ ಕೇಂದ್ರಗಳ ವಿಚಾರಣೆ ನಡೆಸಿದರು. ವಿಧಿಸಿದ ದಂಡದ ಒಟ್ಟು ಮೊತ್ತ ₹3.65 ಲಕ್ಷ.
ಮುಂದಿನ ದಿನಗಳಲ್ಲಿ ಯಾವುದೇ ನ್ಯೂನತೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ನೀಡುವಂತೆ, ರೋಗಿಗಳು ಭೇಟಿ ನೀಡಿದಾಗ ಸೂಕ್ತ ಮಾಹಿತಿಯನ್ನು ಕಡ್ಡಾಯವಾಗಿ ನೀಡುವಂತೆ ಹಾಗೂ ರೋಗಿಗಳು ಮತ್ತು ಸಾರ್ವಜನಿಕರಿಗೆ ಆಪ್ತ ಸಮಾಲೋಚನೆ ನಡೆಸಿ ಸಮನ್ವಯ ಸಾಧಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ದಂಡ ವಿವರ: ವಸಂತನಗರದ ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ ₹10,000; ಕಾಟನ್‌ಪೇಟೆಯ ಮಲ್ಲಿಕಾ ಆಸ್ಪತ್ರೆ ₹25,000; ದೇವಿನಗರದ ಶಾಮಾ ಚಾರಿಟಬಲ್ ಕ್ಲಿನಿಕ್ ₹10,000; ಸಿ.ವಿ. ರಾಮನ್ ನಗರದ ಕಂಫರ್ಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ₹1 ಲಕ್ಷ; ಯಲಹಂಕದ ಸೆವೆನ್ ಹಿಲ್ಸ್ ಪಾಲಿ ಕ್ಲಿನಿಕ್ ₹10,000; ಬಿನ್ನಿಪೇಟೆಯ ವೆಸ್ಟ್ ಸೈಡ್ ಆಸ್ಪತ್ರೆ ಮತ್ತು ಸಂಜೀವಿನಿ ನೋವು ನಿರ್ವಹಣೆ, ಪುನರುತ್ಪಾದನಾ ಕೇಂದ್ರ ₹1 ಲಕ್ಷ; ರಾಜಾಜಿನಗರದ ಲ್ಯಾಸಿಂಗ್ಟನ್ ಹೆಲ್ತ್ ಕೇರ್ ಪ್ರೈ. ಲಿ. ₹50,000; ಕಾಡುಗೊಂಡನಹಳ್ಳಿಯ ವಿನೋಬ್ ನಗರದ ರಝೀಯ ಕ್ಲಿನಿಕ್ ₹10,000; ಉತ್ತರಹಳ್ಳಿಯ ಶ್ರೀ ವಿನಾಯಕ ಕ್ಲಿನಿಕ್ ₹50,000.
ಯಲಹಂಕದ ಮಣಿಪಾಲ್ ಆಸ್ಪತ್ರೆ ರೋಗಿಯಿಂದ ಪಡೆದ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಸ್ಥಳದಲ್ಲೇ ಎರಡು ಪ್ರಕರಣಗಳನ್ನು ಮುಕ್ತಾಯಗೊಳಿಸಲಾಯಿತು; ಮೂರು ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿರಾಜುದ್ದೀನ್ ಮದಿನಿ, ಜಿಲ್ಲಾ ಆರೋಗ್ಯಾಧಿಕಾರಿ ನದೀಮ್ ಮೊಹ್ಮದ್, ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:
