ಬೆಂಗಳೂರಿನ ಕಸದ ಬ್ಲಾಕ್ ಸ್ಪಾಟ್ಗಳ ವಿರುದ್ಧ ಲೋಕಾಯುಕ್ತರ ಸರ್ಜಿಕಲ್ ಸ್ಟ್ರೈಕ್; ಐದು ನಗರ ಪಾಲಿಕೆಗಳಲ್ಲಿ ವಿಶೇಷ ತಪಾಸಣೆ
ಬೆಂಗಳೂರು, ಜೂನ್ 5: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ಕಸದ ಬ್ಲಾಕ್ ಸ್ಪಾಟ್ಗಳ ಸಮಸ್ಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಮಸ್ಯೆಯನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಲೋಕಾಯುಕ್ತರು, ಈಗ ಐದು ವಿಶೇಷ ತಂಡಗಳನ್ನು ರಚಿಸಿ ನಗರಾದ್ಯಂತ ತಪಾಸಣೆ ನಡೆಸಲು ಮುಂದಾಗಿದ್ದಾರೆ.
ಲೋಕಾಯುಕ್ತ ಸಂಸ್ಥೆಯು ಈ ಹಿಂದೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವುದು ಹಾಗೂ ವಿವಿಧ ಪ್ರದೇಶಗಳಲ್ಲಿ ಕಸದ ರಾಶಿಗಳನ್ನು ಸುರಿಯುತ್ತಿರುವ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಈ ಸಂಬಂಧ ಹಲವಾರು ಬಾರಿ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿ, ಸಮಸ್ಯೆ ಪರಿಹರಿಸಲು ವಿವಿಧ ಸೂಚನೆಗಳನ್ನು ನೀಡಲಾಗಿತ್ತು.
ಆದರೆ, ಹಲವು ಸೂಚನೆಗಳು ಹಾಗೂ ಪರಿಶೀಲನೆಗಳ ಬಳಿಕವೂ ಕಸದ ವಿಲೇವಾರಿ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧೀಕ್ಷಕರನ್ನೊಳಗೊಂಡ ವಿವಿಧ ಹಂತದ ಅಧಿಕಾರಿಗಳ ಐದು ವಿಶೇಷ ತಂಡಗಳನ್ನು ರಚಿಸಿ, ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ತಂಡಗಳು ಜೂನ್ 5ರಂದು ಬೆಳಿಗ್ಗೆ ವಿವಿಧ ಪಾಲಿಕೆ ವ್ಯಾಪ್ತಿಗಳಿಗೆ ಭೇಟಿ ನೀಡಿ ತಪಾಸಣೆ ಆರಂಭಿಸಿವೆ.
ಲೋಕಾಯುಕ್ತರಿಂದ ಖುದ್ದು ಸ್ಥಳ ಪರಿಶೀಲನೆ
ತಪಾಸಣೆಯ ಭಾಗವಾಗಿ ಲೋಕಾಯುಕ್ತರು ಸ್ವತಃ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಆರ್.ಟಿ.ನಗರ, ಬ್ಯಾಟರಾಯನಪುರ, ಆನಂದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸುಮಾರು ಆರು ಕಸದ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಯಿತು. ಸ್ಥಳದಲ್ಲಿದ್ದ ಬೆಂಗಳೂರು ಉತ್ತರ ನಗರ ಪಾಲಿಕೆಯ ಜಂಟಿ ಆಯುಕ್ತ ಮೊಯಿನ್, ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ಹಾಗೂ ಇತರ ಅಧಿಕಾರಿಗಳು, ಜೊತೆಗೆ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮುಖ್ಯ ಕಾರ್ಯಾಚರಣಾಧಿಕಾರಿ ಕರೀಗೌಡ, ಡಿಜಿಎಂ ರಮಾಮಣಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣವೇ ಕಸದ ಬ್ಲಾಕ್ ಸ್ಪಾಟ್ಗಳನ್ನು ತೆರವುಗೊಳಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಯಿತು.
ರಾಜಕಾಲುವೆ ಸಮಸ್ಯೆಗೂ ಸೂಚನೆ
ಪರಿಶೀಲನೆ ವೇಳೆ 4ನೇ ಮುಖ್ಯರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ನಗರ ಮುಸ್ಲಿಂ ಎಜುಕೇಷನ್ ಸೊಸೈಟಿ ಎದುರಿನ ಪ್ರದೇಶದಲ್ಲಿ ಮಳೆಯ ಸಮಯದಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗುತ್ತಿರುವ ಸಮಸ್ಯೆಯೂ ಲೋಕಾಯುಕ್ತರ ಗಮನಕ್ಕೆ ಬಂದಿದೆ.
ಈ ಕುರಿತು ಸ್ಥಳದಲ್ಲಿದ್ದ ಕಾರ್ಯಪಾಲಕ ಇಂಜಿನಿಯರ್ಗೆ ತಕ್ಷಣವೇ ಸಮಸ್ಯೆ ಪರಿಹರಿಸಿ, ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಯಿತು.
ವರದಿ ಆಧರಿಸಿ ಮುಂದಿನ ಕ್ರಮ
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ತಪಾಸಣೆ ನಡೆಸುತ್ತಿರುವ ವಿಶೇಷ ತಂಡಗಳು ತಮ್ಮ ಪರಿಶೀಲನಾ ಕಾರ್ಯವನ್ನು ಮುಂದುವರಿಸಲಿವೆ. ಈ ತಂಡಗಳ ವರದಿ ಆಧರಿಸಿ ಈಗಾಗಲೇ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಸಂಬಂಧಿತ ಅಧಿಕಾರಿಗಳನ್ನು ಎದುರುದಾರರನ್ನಾಗಿ ಸೇರಿಸಿ ತನಿಖೆ ಮುಂದುವರಿಸುವ ಸಾಧ್ಯತೆ ಇದೆ.
ನಗರದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಲೋಕಾಯುಕ್ತರು ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ, ಬ್ಲಾಕ್ ಸ್ಪಾಟ್ಗಳು ಹಾಗೂ ನಾಗರಿಕರ ದೂರುಗಳ ನಡುವೆ ಲೋಕಾಯುಕ್ತರ ಈ ನೇರ ಹಸ್ತಕ್ಷೇಪವು ನಗರ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
