42 ಗಂಟೆಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ: ‘ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜೂನ್ 5: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ದೊಡ್ಡ ರಾಜಕೀಯ ಆಘಾತ ಎದುರಾಗಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ 42 ಗಂಟೆಗಳಲ್ಲೇ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಜೂನ್ 3ರಂದು ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಮಲಿಂಗಾ ರೆಡ್ಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಖಾತೆ ಹಂಚಿಕೆ ಬಳಿಕ ಅಸಮಾಧಾನಗೊಂಡ ಅವರು ಜೂನ್ 5ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ಕೊರಮಂಗಲದ ತಮ್ಮ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ, “ನನಗೆ ಯಾರ ಮೇಲೂ ಕೋಪ ಇಲ್ಲ. ಆದರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಅವರಿಗೆ ಸರ್ಕಾರದಲ್ಲಿ ಪ್ರಮುಖ ಮತ್ತು ಮಧ್ಯಮ ನೀರಾವರಿ ಖಾತೆ ನೀಡಲಾಗಿತ್ತು. ಆದರೆ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿರೀಕ್ಷಿಸಿದ್ದರು ಎನ್ನಲಾಗಿದೆ. ಖಾತೆ ಹಂಚಿಕೆ ವೇಳೆ ಈ ನಿರೀಕ್ಷೆ ಈಡೇರದ ಕಾರಣ ಅವರು ಅಸಮಾಧಾನಗೊಂಡಿದ್ದರು.
ರಾಜೀನಾಮೆ ಘೋಷಿಸುವ ವೇಳೆ ರಾಮಲಿಂಗಾ ರೆಡ್ಡಿ ಮಹತ್ವದ ಹೇಳಿಕೆ ನೀಡಿದರು. ಮೂರು ವರ್ಷಗಳ ಹಿಂದೆ ಡಿ.ಕೆ. ಶಿವಕುಮಾರ್ ತಮ್ಮ ಮನೆಗೆ ಭೇಟಿ ನೀಡಿದ್ದಾಗ, ತಾವು ಮುಖ್ಯಮಂತ್ರಿ ಆದರೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಅವರು ಬಹಿರಂಗಪಡಿಸಿದರು.
“ನಾನು ಯಾರ ಬಳಿಗೂ ಹೋಗಿ ನನ್ನನ್ನು ಸಚಿವರನ್ನಾಗಿ ಮಾಡಿ ಎಂದು ಕೇಳಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಬೆಂಗಳೂರು ಖಾತೆ ನಿಮಗೆ ಕೊಡುತ್ತೇನೆ ಎಂದು ಹೇಳಿದ್ದರು. ನಾನು ಕೇಳಿರಲಿಲ್ಲ. ಆದರೆ ಕೊನೆಗೆ ಅದು ಬೇರೆಯವರಿಗೆ ಹೋಯಿತು. ಅದೇ ನನಗೆ ಬೇಸರ ತಂದಿತು,” ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ರಾಜಕೀಯ ವಲಯದಲ್ಲಿ ಡಿ.ಕೆ. ಶಿವಕುಮಾರ್ ಸ್ವತಃ ಬೆಂಗಳೂರು ಅಭಿವೃದ್ಧಿ ವಿಭಾಗವನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬಹುದು ಅಥವಾ ರಾಮಲಿಂಗಾ ರೆಡ್ಡಿಗೆ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲರ ಅಚ್ಚರಿಗೆ ಕೃಷ್ಣ ಬೈರೇಗೌಡ ಅವರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸೇರಿದಂತೆ ಜಿಬಿಎ, ಬಿಬಿಎಂಪಿ ವಿಭಜನೆಯ ಬಳಿಕದ ಐದು ನಗರ ಪಾಲಿಕೆಗಳು, ಬಿಎಂಆರ್ಸಿಎಲ್ ಹಾಗೂ ಜಲಮಂಡಳಿಯ ಜವಾಬ್ದಾರಿ ನೀಡಲಾಯಿತು.
ಕಾಂಗ್ರೆಸ್ ಮೂಲಗಳ ಪ್ರಕಾರ, ಕೃಷ್ಣ ಬೈರೇಗೌಡ ಅವರಿಗೆ ಈ ಪ್ರಮುಖ ಖಾತೆ ನೀಡುವ ನಿರ್ಧಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರ ಆಶೀರ್ವಾದವೂ ಪ್ರಮುಖ ಪಾತ್ರ ವಹಿಸಿದೆ ಎಂಬ ಚರ್ಚೆ ಪಕ್ಷದೊಳಗೆ ಕೇಳಿಬರುತ್ತಿದೆ.
ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಿಸಿದ ತಕ್ಷಣ ಕಾಂಗ್ರೆಸ್ ನಾಯಕತ್ವ ಎಚ್ಚೆತ್ತುಕೊಂಡಿತು. ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಸೇರಿದಂತೆ ಹಲವು ನಾಯಕರು ಅವರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಮಲಿಂಗಾ ರೆಡ್ಡಿ ಅವರಿಗೆ ತಾವು ಈ ಹಿಂದೆ ನೀಡಿದ್ದ ಭರವಸೆ ನಿಜ ಎಂದು ಒಪ್ಪಿಕೊಂಡರು.
“ಹೌದು, ನಾನು ಅವರಿಗೆ ಆ ಖಾತೆ ಕೊಡುತ್ತೇನೆ ಎಂದು ಹೇಳಿದ್ದೆ. ನನ್ನ ತಮ್ಮ ಡಿ.ಕೆ. ಸುರೇಶ್ ಜೊತೆಯಾಗಿ ಹೋಗಿ ಮಾತನಾಡಿದ್ದೆವು. ಆದರೆ ಹೈಕಮಾಂಡ್ ಒಂದು ನಿರ್ಧಾರ ತೆಗೆದುಕೊಂಡಿದೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ನೀಡಲಾಗಿದೆ. ರಾಮಲಿಂಗಾ ರೆಡ್ಡಿ ಹಿರಿಯ ನಾಯಕರು, ನನ್ನ ಆತ್ಮೀಯ ಸ್ನೇಹಿತರು. ನಾನು ಅವರನ್ನು ಭೇಟಿಯಾಗಿ ಮಾತಾಡುತ್ತೇನೆ,” ಎಂದು ಶಿವಕುಮಾರ್ ಹೇಳಿದರು.
ರಾಮಲಿಂಗಾ ರೆಡ್ಡಿ ಅವರ ಅಸಮಾಧಾನ ಮಾತ್ರವಲ್ಲ, ಖಾತೆ ಹಂಚಿಕೆ ಕುರಿತು ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಕೂಡ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮುನಿಯಪ್ಪ ತೃಪ್ತಿ ವ್ಯಕ್ತಪಡಿಸಿ, ಪಕ್ಷದ ನಿರ್ಧಾರವನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಇನ್ನೊಂದೆಡೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದವು. ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿ, ಜಮೀರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.
ರಾಮಲಿಂಗಾ ರೆಡ್ಡಿ ರಾಜೀನಾಮೆ ಘಟನೆಯು ಡಿ.ಕೆ. ಶಿವಕುಮಾರ್ ಸರ್ಕಾರದ ಆರಂಭಿಕ ದಿನಗಳಲ್ಲೇ ಕಾಂಗ್ರೆಸ್ ಒಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದೆ. ಹಿರಿಯ ನಾಯಕರ ನಿರೀಕ್ಷೆಗಳು, ಪ್ರಾದೇಶಿಕ ರಾಜಕೀಯ ಸಮೀಕರಣಗಳು ಮತ್ತು ಹೈಕಮಾಂಡ್ನ ನಿರ್ಧಾರಗಳ ನಡುವೆ ಸಮತೋಲನ ಸಾಧಿಸುವುದು ಹೊಸ ಸರ್ಕಾರದ ಮುಂದಿರುವ ಮೊದಲ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈಗ ಕಾಂಗ್ರೆಸ್ ನಾಯಕತ್ವ ರಾಮಲಿಂಗಾ ರೆಡ್ಡಿಯನ್ನು ಮನವೊಲಿಸಿ ರಾಜೀನಾಮೆ ಹಿಂಪಡೆಯಲು ಯಶಸ್ವಿಯಾಗುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
