ಕೋಲಾರದ ಖಾಸಗಿ ಫಾರ್ಮ್ಹೌಸ್ನಲ್ಲಿ ಸರ್ಕಾರಿ ಕಂದಾಯ ದಾಖಲೆ ಪತ್ತೆ; ಪ್ರಾಥಮಿಕ ವಿಚಾರಣೆಗೆ ಲೋಕಾಯುಕ್ತ ಆದೇಶ
ಬೆಂಗಳೂರು, ಜುಲೈ 23: ಕೋಲಾರ ಜಿಲ್ಲೆಯ ಖಾಸಗಿ ಫಾರ್ಮ್ಹೌಸ್ನಲ್ಲಿ ದೊಡ್ಡ ಪ್ರಮಾಣದ ಮೂಲ ಸರ್ಕಾರಿ ಕಂದಾಯ ದಾಖಲೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತವು ಪ್ರಾಥಮಿಕ ವಿಚಾರಣೆಗೆ ಆದೇಶಿಸಿದೆ. ಸರ್ಕಾರಿ ಭೂ ದಾಖಲೆಗಳನ್ನು ಅನಧಿಕೃತವಾಗಿ ಹೊರತೆಗೆದು ದುರ್ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಲೋಕಾಯುಕ್ತ ಪ್ರಕಟಣೆಯ ಪ್ರಕಾರ, ಕೋಲಾರ ಮತ್ತು ಮಾಲೂರು ತಹಶೀಲ್ದಾರ್ ಕಚೇರಿಗಳು ಹಾಗೂ ಸಹಾಯಕ ಭೂ ದಾಖಲೆಗಳ ನಿರ್ದೇಶಕರ (ಎಡಿಎಲ್ಆರ್) ಕಚೇರಿಗಳಲ್ಲಿನ ಅಕ್ರಮಗಳ ಕುರಿತು ಕೋಲಾರ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ವರದಿಯ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಸ್ಥಳಗಳಲ್ಲಿ ಶೋಧ ನಡೆಸಲಾಯಿತು.

ಶೋಧದ ವೇಳೆ ಒಟ್ಟು 435 ಕಂದಾಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ 128 ಮೂಲ ಸರ್ಕಾರಿ ದಾಖಲೆಗಳಾಗಿವೆ. ಇವುಗಳಲ್ಲಿ ಗ್ರಾಂಟ್ ರಿಜಿಸ್ಟರ್ಗಳು, ಪಟ್ಟಾ ಪುಸ್ತಕಗಳು, ಖಾತಾ ರಿಜಿಸ್ಟರ್ಗಳು, ಫೋಡಿ ದಾಖಲೆಗಳು ಸೇರಿದಂತೆ ವಿವಿಧ ಅಧಿಕೃತ ದಾಖಲೆಗಳು ಸೇರಿವೆ. ಈ ದಾಖಲೆಗಳನ್ನು ಸರ್ಕಾರಿ ಕಚೇರಿಗಳಿಂದ ಹೊರತೆಗೆದು ನಕಲಿ ಭೂ ದಾಖಲೆಗಳನ್ನು ಸೃಷ್ಟಿಸುವ ಉದ್ದೇಶದಿಂದ ಖಾಸಗಿ ಫಾರ್ಮ್ಹೌಸ್ನಲ್ಲಿ ಇರಿಸಲಾಗಿತ್ತು ಎಂಬ ಶಂಕೆಯನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ದಾಖಲೆಗಳ ತಾಂತ್ರಿಕ ಪರಿಶೀಲನೆಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳ ನೆರವು ಪಡೆಯಲಾಗಿದೆ. ಮೂಲ ದಾಖಲೆಗಳು ಹೇಗೆ ಸರ್ಕಾರಿ ಕಚೇರಿಗಳಿಂದ ಹೊರಬಂದವು ಮತ್ತು ಇದಕ್ಕೆ ಯಾರು ಹೊಣೆ ಎಂಬುದರ ಕುರಿತು ಜಿಲ್ಲಾಡಳಿತದಿಂದ ವಿವರ ಕೇಳಲಾಗಿದೆ.
ಸುಮಾರು 485 ಎಕರೆ ಸರ್ಕಾರಿ ಭೂಮಿಗೆ ಸಂಬಂಧಿಸಿದ ನಕಲಿ ದಾಖಲೆಗಳು ಸೃಷ್ಟಿಯಾಗಿರುವ ಸಾಧ್ಯತೆ ಇದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ₹768 ಕೋಟಿ ನಷ್ಟ ಉಂಟಾಗಿರಬಹುದು ಎಂದು ತನಿಖಾ ವರದಿ ಉಲ್ಲೇಖಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಲೋಕಾಯುಕ್ತವು ಹಿರಿಯ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ 2026ರ ಆಗಸ್ಟ್ 21ರಂದು ಮಧ್ಯಾಹ್ನ 3.30ಕ್ಕೆ ಪ್ರಾಥಮಿಕ ವಿಚಾರಣೆ ನಡೆಸಲು ಆದೇಶಿಸಿದೆ.
