Home Uncategorized Moonlighting: ಲೋಕಸಭೆಯಲ್ಲೂ ಪ್ರತಿಧ್ವನಿಸಿದ ಮೂನ್​ಲೈಟಿಂಗ್; ನಿಯಮಾನುಸಾರ ಅವಕಾಶವಿಲ್ಲವೆಂದ ಕೇಂದ್ರ

Moonlighting: ಲೋಕಸಭೆಯಲ್ಲೂ ಪ್ರತಿಧ್ವನಿಸಿದ ಮೂನ್​ಲೈಟಿಂಗ್; ನಿಯಮಾನುಸಾರ ಅವಕಾಶವಿಲ್ಲವೆಂದ ಕೇಂದ್ರ

4
0

ನವದೆಹಲಿ: ಕೆಲವು ತಿಂಗಳುಗಳ ಹಿಂದೆ ಐಟಿ ಉದ್ಯಮ ವಲಯದಲ್ಲಿ (IT Industry) ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೂನ್​ಲೈಟಿಂಗ್ (Moonlighting) ವಿಚಾರ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ನಿಯಮಾನುಸಾರ ಮೂನ್​ಲೈಟಿಂಗ್​ಗೆ ಅವಕಾಶವಿಲ್ಲ. ಆದರೆ ಈ ವಿಚಾರವಾಗಿ ಯಾವುದೇ ಸಮೀಕ್ಷೆ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸರಳವಾಗಿ ಹೇಳುವುದಾದರೆ ಕಂಪನಿಯೊಂದರ ಪೂರ್ಣಾವಧಿ ಉದ್ಯೋಗಿಯು ಉದ್ಯೋಗದಾತನ ಅರಿವಿಗೆ ಬಾರದೆ ಬೇರೆ ಕಂಪನಿ ಪರ ಕಾರ್ಯನಿರ್ವಹಿಸುವುದನ್ನು ಮೂನ್​ಲೈಟಿಂಗ್ ಎನ್ನಲಾಗುತ್ತದೆ. ಕೋವಿಡೋತ್ತರ ದಿನಗಳಲ್ಲಿ ಮತ್ತು ವರ್ಕ್​ ಫ್ರಂ ಹೋಮ್ ಅನ್ನು ಕೆಲವು ಕಂಪನಿಗಳು ಕೊನೆಗೊಳಿಸಲು ಮುಂದಾದ​ ಸಂದರ್ಭದಲ್ಲಿ ಈ ಕುರಿತು ಐಟಿ ವಲಯದಲ್ಲಿ ಹೆಚ್ಚು ಚರ್ಚೆಯಾಗಿತ್ತು.

‘ಕೈಗಾರಿಕಾ ಉದ್ಯೋಗ ಕಾಯ್ದೆ 1946’ರ ಪ್ರಕಾರ ಉದ್ಯೋಗಿಗಳು ತಾವು ಕೆಲಸ ಮಾಡುತ್ತಿರುವ ಕಂಪನಿಯ ಹಿತಾಸಕ್ತಿಗೆ ವಿರುದ್ಧವಾಗಿ ಬೇರೊಂದು ಸಂಸ್ಥೆಯ ಪರವಾಗಿ ಕೆಲಸ ಮಾಡಬಾರದು. ಇದರಿಂದ ಉದ್ಯೋಗದಾತರ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Moonlighting: 300 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ

ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಲು ಮೂನ್​ಲೈಟಿಂಗ್ ಒಂದು ಸೂಕ್ತ ಕಾರಣ ಎಂಬುದನ್ನು ಸರ್ಕಾರ ಒಪ್ಪುತ್ತದೆಯೇ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ರೀತಿಯ ಉತ್ತರ ನೀಡಿದ್ದಾರೆ.

ಉದ್ಯೋಗಿಗಳ ವಜಾ ಕುರಿತು ಸಚಿವರು ಹೇಳಿದ್ದೇನು?

ಮೂನ್​ಲೈಟಿಂಗ್ ಪರಿಣಾಮವಾಗಿ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದನ್ನು ಸರ್ಕಾರ ಗಮನಿಸಿದೆಯೇ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉದ್ಯೋಗಕ್ಕೆ ನೇಮಕಾತಿ ಮತ್ತು ವಜಾಗೊಳಿಸುವಿಕೆ ಉದ್ಯಮ ವಲಯದ ಸಾಮಾನ್ಯ ಪ್ರಕ್ರಿಯೆಗಳಾಗಿವೆ. ಮೂನ್​ಲೈಟಿಂಗ್​ ಕಾರಣಕ್ಕಾಗಿಯೇ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಮೂನ್​ಲೈಟಿಂಗ್ ಬಗ್ಗೆ ಸರ್ಕಾರ ಸಮೀಕ್ಷೆ ಹಾಗೂ ಅಧ್ಯಯನ ನಡೆಸಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು, ಇಲ್ಲವೆಂದು ಉತ್ತರಿಸಿದ್ದಾರೆ.

ಮೂನ್​ಲೈಟಿಂಗ್ ಆರೋಪದಲ್ಲಿ ವಿಪ್ರೋ ಸೇರಿದಂತೆ ಕೆಲವು ಐಟಿ ಕಂಪನಿಗಳು ಇತ್ತೀಚೆಗೆ ಹತ್ತಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಅಪ್ರಾಮಾಣಿಕ ನಡವಳಿಕೆ ತೋರಿದ 20 ಮಂದಿ ಉನ್ನತ ಸಿಬ್ಬಂದಿಯನ್ನು ಕಂಪನಿಯಿಂದ ವಜಾ ಮಾಡುವ ಬಗ್ಗೆ ಕೇವಲ 10 ನಿಮಿಷಗಳಲ್ಲಿ ನಿರ್ಧಾರ ಕೈಗೊಂಡಿದ್ದೆವು ಎಂದು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ ಹೇಳಿದ್ದರು. ಮೂನ್​ಲೈಟಿಂಗ್​ ಹಿನ್ನೆಲೆಯಲ್ಲಿ ವಿಪ್ರೋ ತನ್ನ 300 ಉದ್ಯೋಗಿಗಳನ್ನು ಸೆಪ್ಟೆಂಬರ್​ನಲ್ಲಿ ವಜಾಗೊಳಿಸಿತ್ತು. ಕೆಲವು ತಿಂಗಳುಗಳಿಂದ ಈ ಉದ್ಯೋಗಿಗಳು ತಮ್ಮ ಕಂಪನಿ ಜತೆಗೆ ಇತರೆ ಕಂಪನಿಗಳಿಗಾಗಿ ಕೆಲಸ ಮಾಡುತ್ತಿರುವ ವಿಷಯ ಬೆಳಕಿಗೆ ಬಂದ ಕಾರಣ ಕ್ರಮ ಕೈಗೊಂಡಿರುವುದಾಗಿ ವಿಪ್ರೋ ಹೇಳಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here