ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆಮೆ ದಿನ ಆಚರಣೆ
ಬೆಂಗಳೂರು, ಮೇ 23: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (BBP) ವಿಶ್ವ ಆಮೆ ದಿನವನ್ನು ವಿವಿಧ ಜಾಗೃತಿ ಮತ್ತು ಸಂರಕ್ಷಣಾ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಇಂಡಿಯಾ ಪೋಸ್ಟ್, ಪೋಸ್ಟ್ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ ಹಾಗೂ ಪೋಸ್ಟ್ಕಾರ್ಡ್ಸ್ ವಿಲ್ಲೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಉಪ ಮುಖ್ಯ ಅಂಚೆ ಅಧೀಕ್ಷಕರಾದ ದಿನೇಶ್ ನಾರಾಯಣ್, ಬೆಂಗಳೂರು ದಕ್ಷಿಣ ಅಂಚೆ ಕಚೇರಿಗಳ ಸಹಾಯಕ ಅಧೀಕ್ಷಕರಾದ ನಳಿನಿ ಎನ್., ಬಿಬಿಪಿ ಉಪ ನಿರ್ದೇಶಕಿ ಅನುಷಾ, ಪಶುವೈದ್ಯಕೀಯ ಸೇವೆಗಳ ಉಪ ನಿರ್ದೇಶಕರಾದ ಡಾ. ಪ್ರಯಾಗ್, ವಲಯ ಅರಣ್ಯಾಧಿಕಾರಿ ಆನಂದ್ ಮಡಾನೆ, ಉಪ ವಲಯ ಅರಣ್ಯಾಧಿಕಾರಿಗಳಾದ ಅರ್ಪಿತಾ ಮತ್ತು ಮಹೇಶ್ ಭಾಗವಹಿಸಿದ್ದರು.
ಶಿಕ್ಷಣಾತ್ಮಕ ಪೋಸ್ಟ್ಕಾರ್ಡ್ ಬಿಡುಗಡೆ
ಕಾರ್ಯಕ್ರಮದ ಅಂಗವಾಗಿ ಸಾಮಾನ್ಯವಾಗಿ ಕಂಡುಬರುವ ಆಮೆಗಳು, ಟಾರ್ಟಾಯಿಸ್ಗಳು, ಟೆರಪಿನ್ಗಳು ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಒಂಬತ್ತು ಶಿಕ್ಷಣಾತ್ಮಕ ಪೋಸ್ಟ್ಕಾರ್ಡ್ಗಳನ್ನು ಬಿಡುಗಡೆ ಮಾಡಲಾಯಿತು.
ಈ ಪೋಸ್ಟ್ಕಾರ್ಡ್ಗಳಲ್ಲಿ ವಿವಿಧ ಜಾತಿಗಳ ನಡುವಿನ ವ್ಯತ್ಯಾಸಗಳು ಹಾಗೂ ಅವುಗಳ ಪರಿಸರ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಲಾಗಿತ್ತು.
ಸಂರಕ್ಷಣಾ ಕಿರುಚಿತ್ರ ಪ್ರದರ್ಶನ
ರೌಂಡ್ಗ್ಲಾಸ್ ಸಸ್ಟೇನ್ ಸಹಯೋಗದಲ್ಲಿ ಆಮೆ ಸಂರಕ್ಷಣೆ ಕುರಿತ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು.
ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಹೇಗೆ ಪಾತ್ರವಹಿಸಬಹುದು ಎಂಬುದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಜೀವಂತ ಗಾತ್ರದ ಸಮುದ್ರ ಆಮೆ ಮಾದರಿಗಳ ಪ್ರದರ್ಶನ
ಬಿಬಿಪಿಯ ಸರಿಸೃಪ ಉದ್ಯಾನದಲ್ಲಿ ಏಳು ಜೀವಂತ ಗಾತ್ರದ ಸಮುದ್ರ ಆಮೆಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಪ್ರದರ್ಶನದ ಮೂಲಕ ಭೇಟಿ ದಾರರಿಗೆ ವಿವಿಧ ಆಮೆ ಜಾತಿಗಳು, ಅವುಗಳ ಪರಿಸರದಲ್ಲಿನ ಪಾತ್ರ , ವಿಶಿಷ್ಟ ಜೀವನ ಶೈಲಿ ಮತ್ತು ಹೊಂದಾಣಿಕೆಗಳು ಬಗ್ಗೆ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಸೂರ್ಯ ಸೇನ್ ಎ.ವಿ., ಐಎಫ್ಎಸ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು.
