ಮುಂಬೈ ರೋಡ್ಶೋ ಎರಡನೇ ದಿನ: ಸಿಪ್ಲಾದಿಂದ ₹200 ಕೋಟಿ, ರಾಕೆಟ್ ಇಂಡಿಯಾದಿಂದ ₹100 ಕೋಟಿ ಹೂಡಿಕೆ ಘೋಷಣೆ
ಬೆಂಗಳೂರು: ರಾಜ್ಯಕ್ಕೆ ಹೊಸ ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ಎರಡು ದಿನಗಳ ರೋಡ್ಶೋ ಎರಡನೇ ದಿನವೂ ಉತ್ತಮ ಸ್ಪಂದನೆ ದೊರೆತಿದ್ದು, ಸಿಪ್ಲಾ ₹200 ಕೋಟಿ ಹಾಗೂ ರಾಕೆಟ್ ಇಂಡಿಯಾ ₹100 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿವೆ.
ಎರಡನೇ ದಿನ ರಾಜ್ಯ ಸರ್ಕಾರದ ನಿಯೋಗವು ಬ್ಲಾಕ್ಸ್ಟೋನ್, ಸೇಂಟ್-ಗೋಬೈನ್, ಹೊರೈಜನ್, ಹೆಂಕೆಲ್, ಕೆಇಸಿ ಇಂಟರ್ನ್ಯಾಷನಲ್, ಐಡಿಯಾಫೋರ್ಜ್ ಟೆಕ್ನಾಲಜಿ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಪ್ರತಿನಿಧಿಗಳೊಂದಿಗೆ ಹೂಡಿಕೆ ಕುರಿತ ಮಾತುಕತೆ ನಡೆಸಿತು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮಾಹಿತಿ ನೀಡಿ, ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ತನ್ನ ಉತ್ಪಾದನಾ ಘಟಕದ ವಿಸ್ತರಣೆಗೆ ಸಿಪ್ಲಾ ₹200 ಕೋಟಿ ಹೂಡಿಕೆ ಮಾಡುತ್ತಿದ್ದು, ವಿಸ್ತರಿತ ಘಟಕದಲ್ಲಿ 2026ರ ಡಿಸೆಂಬರ್ನಿಂದ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಸಸ್ಯ ಆಧಾರಿತ ಪ್ರೋಟೀನ್ ಉತ್ಪನ್ನಗಳನ್ನು ತಯಾರಿಸುತ್ತಿರುವ ರಾಕೆಟ್ ಇಂಡಿಯಾ ತನ್ನ ಉತ್ಪಾದನಾ ಘಟಕ ವಿಸ್ತರಣೆಗೆ ₹100 ಕೋಟಿ ಹೂಡಿಕೆ ಮಾಡಲಿದೆ ಎಂದು ಅವರು ತಿಳಿಸಿದರು.
ಕಂಪನಿಗೆ ಅಗತ್ಯವಿರುವ ಪ್ರಮುಖ ಕಚ್ಚಾ ವಸ್ತುವಾದ ಮೆಕ್ಕೆಜೋಳದ ಸಮರ್ಪಕ ಪೂರೈಕೆ ಕುರಿತು ರಾಜ್ಯ ಸರ್ಕಾರ ಭರವಸೆ ನೀಡಿದೆ. ಕರ್ನಾಟಕವು ದೇಶದ ಪ್ರಮುಖ ಮೆಕ್ಕೆಜೋಳ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವುದರಿಂದ ಕಂಪನಿಗೆ ನಿರಂತರ ಕಚ್ಚಾ ವಸ್ತು ಲಭ್ಯವಾಗಲಿದ್ದು, ರೈತರಿಗೆ ತಮ್ಮ ಉತ್ಪನ್ನಕ್ಕೆ ಸ್ಥಿರ ಮಾರುಕಟ್ಟೆಯೂ ದೊರೆಯಲಿದೆ ಎಂದು ಅವರು ಹೇಳಿದರು.

ಇದರ ಜೊತೆಗೆ ರಾಕೆಟ್ ಇಂಡಿಯಾ ಬೆಂಗಳೂರಿನಲ್ಲಿ ತನ್ನ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ (GCC) ಸ್ಥಾಪಿಸುವ ಆಸಕ್ತಿಯನ್ನೂ ವ್ಯಕ್ತಪಡಿಸಿದೆ.
ಡಾ. ಸೆಲ್ವಕುಮಾರ್ ಅವರ ಪ್ರಕಾರ, ಬ್ಲಾಕ್ಸ್ಟೋನ್ ಸಂಸ್ಥೆ ಕರ್ನಾಟಕದಲ್ಲಿ ಡೇಟಾ ಸೆಂಟರ್, ನವೀಕರಿಸಬಹುದಾದ ಇಂಧನ ಹಾಗೂ ಫೈಬರ್ ಆಪ್ಟಿಕ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರಿದೆ.
ಜಾಗತಿಕ ಗಾಜು ಮತ್ತು ಸುಧಾರಿತ ವಸ್ತುಗಳ ಉತ್ಪಾದನಾ ಸಂಸ್ಥೆಯಾದ ಸೇಂಟ್-ಗೋಬೈನ್ ರಾಜ್ಯದಲ್ಲಿನ ತನ್ನ ಉತ್ಪಾದನಾ ಘಟಕಗಳನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದು, ವಿಸ್ತರಣೆಗೆ ಲಭ್ಯವಿರುವ ಸೂಕ್ತ ಭೂಮಿಯ ಕುರಿತು ಸರ್ಕಾರ ಮಾಹಿತಿ ನೀಡಿದೆ.
ಹೊರೈಜನ್ ಸಂಸ್ಥೆಗೆ ಕೈಗಾರಿಕಾ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಅವಕಾಶಗಳನ್ನು ಪರಿಶೀಲಿಸುವಂತೆ ಸರ್ಕಾರ ಪ್ರೋತ್ಸಾಹಿಸಿದೆ. ಸಂಸ್ಥೆಯು ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಆಸಕ್ತಿ ಹೊಂದಿದ್ದು, ಇದು ರಾಜ್ಯದಲ್ಲಿ ಸಮತೋಲನದ ಕೈಗಾರಿಕಾ ಬೆಳವಣಿಗೆಗೆ ನೆರವಾಗಲಿದೆ ಎಂದು ತಿಳಿಸಲಾಗಿದೆ.
ಈ ಸಭೆಗಳಲ್ಲಿ ಬ್ಲಾಕ್ಸ್ಟೋನ್ ಸಂಸ್ಥೆಯ ನಿಖಿಲ್ ಜಲಾನ್ ಮತ್ತು ರಚಿತ್ ಮೋಹನ್, ಸೇಂಟ್-ಗೋಬೈನ್ನ ಹರಿ ಸಿಂಘುದಾಸು ಮತ್ತು ಪ್ರಕಾಶ್ ಸಬರದ್, ಹೊರೈಜನ್ನ ಉರ್ವಿಶ್ ರಂಭಿಯಾ ಮತ್ತು ವೆಂಕಟರಾಮನ್, ಸಿಪ್ಲಾದ ಪ್ರಭಾಕರನ್ ನಾಯರ್, ರಾಕೆಟ್ ಇಂಡಿಯಾದ ಪ್ರಸನ್ನ ವೆಂಕಟೇಶ್ ಹಾಗೂ ಐಡಿಯಾಫೋರ್ಜ್ ಟೆಕ್ನಾಲಜಿಯ ಸಚಿನ್ ಮಥೂರ್ ಭಾಗವಹಿಸಿದ್ದರು.
ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಆಯುಕ್ತೆ ಖುಷ್ಬೂ ಗೋಯೆಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
