ವಾಣಿಜ್ಯ ಉದ್ದೇಶಕ್ಕೆ ಅಕ್ರಮವಾಗಿ ಬಳಸುತ್ತಿದ್ದ 263 ದ್ವಿಚಕ್ರ ವಾಹನಗಳ ವಶ; ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ವಿಶೇಷ ಕಾರ್ಯಾಚರಣೆ
ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ (ಬ್ಲಾಕ್) ನೋಂದಣಿ ಹೊಂದಿರುವ ದ್ವಿಚಕ್ರ ವಾಹನಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಪ್ರಕರಣಗಳ ವಿರುದ್ಧ ಸಾರಿಗೆ ಇಲಾಖೆ ಬುಧವಾರ ವಿಶೇಷ ಜಾರಿ ಕಾರ್ಯಾಚರಣೆ ನಡೆಸಿದೆ.
ಮೋಟಾರು ವಾಹನ ಕಾಯ್ದೆ ಹಾಗೂ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಸೇವೆ ನೀಡುತ್ತಿರುವ ಶಂಕೆಯ ಮೇರೆಗೆ ವಿವಿಧ ಪ್ರದೇಶಗಳಲ್ಲಿ ಸಾರಿಗೆ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸಿದರು.

ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ, ಆಗಸ್ಟ್ 5ರಂದು ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 263 ದ್ವಿಚಕ್ರ ವಾಹನಗಳು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಾಸಗಿ ನೋಂದಣಿ ಹೊಂದಿರುವ ವಾಹನಗಳ ಅಕ್ರಮ ವಾಣಿಜ್ಯ ಬಳಕೆಯನ್ನು ತಡೆಯುವುದು ಹಾಗೂ ಸಾರಿಗೆ ನಿಯಮಗಳ ಪರಿಣಾಮಕಾರಿ ಜಾರಿಯನ್ನು ಖಚಿತಪಡಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
