ಬೆಂಗಳೂರು, ಜೂನ್ 10: ಉದ್ಯೋಗ ನೀಡಿದ್ದ ಮನೆಯಲ್ಲಿಯೇ ₹25 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿದ್ದ ನೇಪಾಳಿ ದಂಪತಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿ, ಕಳುವಾಗಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮೇ 28, 2026 ರಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕಾವತಿ ಲೇಔಟ್ ನಿವಾಸಿಯೊಬ್ಬರು ದೂರು ದಾಖಲಿಸಿದ್ದರು. ದೂರುದಾರರು ಗುತ್ತಿಗೆದಾರರಾಗಿದ್ದು, ತಮ್ಮ ಕಾರ್ಮಿಕರಿಗೆ ವೇತನ ಪಾವತಿಸಲು ಬ್ಯಾಂಕಿನಿಂದ ₹25 ಲಕ್ಷ ನಗದು ಹಣವನ್ನು ಪಡೆದಿದ್ದರು.
ಅವರು ಹಣವನ್ನು ಮನೆಯ ಒಂದು ಕೊಠಡಿಯಲ್ಲಿದ್ದ ಕಪಾಟಿನಲ್ಲಿ ಇಟ್ಟು, ಅದರ ಕೀಲಿಯನ್ನು ಮತ್ತೊಂದು ಕಪಾಟಿನಲ್ಲಿದ್ದ ಬಟ್ಟೆಗಳ ಕೆಳಗೆ ಅಡಗಿಸಿಟ್ಟಿದ್ದರು. ಕಳೆದ ಒಂದು ತಿಂಗಳಿನಿಂದ ಅವರ ಮನೆಯಲ್ಲಿ ನೇಪಾಳಿ ದಂಪತಿ ಭದ್ರತಾ ಸಿಬ್ಬಂದಿ ಹಾಗೂ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಮೇ 27 ರಂದು ದೂರುದಾರರು ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದರು. ಸಂಜೆ ಮನೆಗೆ ಮರಳಿದಾಗ ಗೃಹ ಸಹಾಯಕರಾಗಿದ್ದ ದಂಪತಿ ಕಾಣೆಯಾಗಿದ್ದು, ಅವರಿಗೆ ನೀಡಲಾಗಿದ್ದ ಕೊಠಡಿಯ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ.
ಅವರ ಮೊಬೈಲ್ಗಳಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ಅನುಮಾನಗೊಂಡ ದೂರುದಾರರು ಹಣ ಇಟ್ಟಿದ್ದ ಕಪಾಟನ್ನು ಪರಿಶೀಲಿಸಿದಾಗ ₹25 ಲಕ್ಷ ನಗದು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದರು. ಮೇ 28 ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ಕೆಂಗೇರಿ ವ್ಯಾಪ್ತಿಯ ಶಿರ್ಕೆ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ನೇಪಾಳಿ ದಂಪತಿಯನ್ನು ಬಂಧಿಸಲಾಯಿತು.
ಬಂಧಿತರಿಂದ ಕಳುವಾಗಿದ್ದ ಸಂಪೂರ್ಣ ₹25 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳ್ಳತನ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 29 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದ ನಂತರ ಮೇ 30 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಕಾರ್ಯಾಚರಣೆಯನ್ನು ಉತ್ತರ-ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಮಿಥುನ್ ಕುಮಾರ್ ಜಿ.ಕೆ., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಂಪಿಗೆಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಚಂದನ್ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಾಲಾಜಿ ವಿ. ನೇತೃತ್ವದ ತಂಡ ಹಾಗೂ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಹಾಗೂ ಸಂಪೂರ್ಣ ಹಣವನ್ನು ಮರುಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದರು.
ತ್ವರಿತ ಕಾರ್ಯಾಚರಣೆಯ ಮೂಲಕ ಕಳುವಾಗಿದ್ದ ಸಂಪೂರ್ಣ ಹಣವನ್ನು ಮರುಪಡೆಯುವಲ್ಲಿ ಯಶಸ್ವಿಯಾಗಿರುವ ಅಮೃತಹಳ್ಳಿ ಪೊಲೀಸರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
