ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಲಾಂಛನ. ಚಿತ್ರ: @NIA_India/X
ಬೆಂಗಳೂರು: ಶ್ರೀಲಂಕಾದ ಅಧಿಕಾರಿಗಳು ಭಾರತಕ್ಕೆ ವಾಪಸ್ ಕಳುಹಿಸಿದ ಪುಡುಮಡಂ ಇಮ್ರಾನ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನವೆಂಬರ್ 13ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಶ್ರೀಲಂಕಾ ಪ್ರಜೆಗಳ ಮಾನವ ಕಳ್ಳಸಾಗಣೆ ಪ್ರಕರಣದ 15ನೇ ಆರೋಪಿಯಾಗಿರುವ ಇಮ್ರಾನ್ ಬಂಧನದಿಂದ ತಪ್ಪಿಸಿಕೊಂಡಿದ್ದರು ಎಂದು ಸಂಸ್ಥೆ ತಿಳಿಸಿದೆ.
ಎನ್‌ಐಎ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ್ದ ರೆಡ್ ನೋಟಿಸ್ ಆಧರಿಸಿ ಶ್ರೀಲಂಕಾದ ಅಧಿಕಾರಿಗಳು ಇಮ್ರಾನ್ ಅವರನ್ನು ವಶಕ್ಕೆ ಪಡೆದಿದ್ದರು. ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಬಂಧಿಸಿತು.

ಮಾನ್ಯ ದಾಖಲೆಗಳೊಂದಿಗೆ ಕೆನಡಾಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಶ್ರೀಲಂಕಾ ಪ್ರಜೆಗಳನ್ನು ಸೆಳೆಯುವ ಸಂಚಿನಲ್ಲಿ ಇಮ್ರಾನ್ ಭಾಗಿಯಾಗಿದ್ದರು ಎಂದು ಎನ್‌ಐಎ ಆರೋಪಿಸಿದೆ. ಸಂತ್ರಸ್ತರ ಸಂಬಂಧಿಕರಿಂದ ಹಣ ಸಂಗ್ರಹಿಸಿ, ಅವರನ್ನು ಕಳ್ಳಸಾಗಣೆ ಮಾಡಲು ಮತ್ತು ಬಂಧನದಲ್ಲಿಡಲು ಭಾರತದಲ್ಲಿದ್ದ ಸಹ ಆರೋಪಿಗಳಿಗೆ ಹವಾಲಾ ಮೂಲಕ ಕಳುಹಿಸಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
2021ರಲ್ಲಿ ಕರ್ನಾಟಕ ಪೊಲೀಸರು ಮಂಗಳೂರಿನ ಅತಿಥಿಗೃಹಗಳ ಮೇಲೆ ದಾಳಿ ನಡೆಸಿದಾಗ ಮಾನ್ಯ ದಾಖಲೆಗಳಿಲ್ಲದೆ ತಂಗಿದ್ದ ಶ್ರೀಲಂಕಾ ಪ್ರಜೆಗಳು ಪತ್ತೆಯಾಗಿದ್ದರು. ಎನ್‌ಐಎ 2021ರ ಜುಲೈ 13ರಂದು ತನಿಖೆಯನ್ನು ವಹಿಸಿಕೊಂಡು RC-17/2021/NIA/DLI ಸಂಖ್ಯೆಯಡಿ ಪ್ರಕರಣವನ್ನು ಮರುದಾಖಲಿಸಿತು. ಅಪರಾಧ ಸಂಚು, ಮಾನವ ಕಳ್ಳಸಾಗಣೆ ಮತ್ತು ವಂಚನೆ ಆರೋಪಗಳ ಜೊತೆಗೆ ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣದ ಇತರ ಆರೋಪಿಗಳಾದ ಸೀನಿ ಆಬುಲ್ ಖಾನ್ ಮತ್ತು ಇಮ್ರಾನ್ ಖಾನ್ ಅವರನ್ನು ಕ್ರಮವಾಗಿ 2024 ಮತ್ತು 2025ರಲ್ಲಿ ಬಂಧಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ. ಇಬ್ಬರೂ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಸಂಬಂಧಿತ ಸುದ್ದಿ
