ಡ್ರೋನ್ ತಂತ್ರಜ್ಞಾನದಿಂದ ವಿದ್ಯುತ್ ಜಾಲದ ಮೇಲ್ವಿಚಾರಣೆ: 11 ಸಾವಿರಕ್ಕೂ ಹೆಚ್ಚು ಟವರ್ ಪರಿಶೀಲನೆ, 1.5 ಲಕ್ಷ ದೋಷ ಪತ್ತೆ; ವಿದ್ಯುತ್ ವ್ಯತ್ಯಯದಲ್ಲಿ ಶೇ.85 ಇಳಿಕೆ
ಬೆಂಗಳೂರು, ಜೂ. 26: ಕರ್ನಾಟಕದ ವಿದ್ಯುತ್ ಪ್ರಸರಣ ಜಾಲವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ರಾಜ್ಯದಾದ್ಯಂತ ಉಚ್ಚ ವೋಲ್ಟೇಜ್ (HV) ಹಾಗೂ ಅತಿ ಉಚ್ಚ ವೋಲ್ಟೇಜ್ (EHV) ವಿದ್ಯುತ್ ಪ್ರಸರಣ ಮಾರ್ಗಗಳ ಪರಿಶೀಲನೆಗೆ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿದ್ದು, ಇದರ ಪರಿಣಾಮ ವಿದ್ಯುತ್ ಪ್ರಸರಣಕ್ಕೆ ಸಂಬಂಧಿಸಿದ ವಿದ್ಯುತ್ ವ್ಯತ್ಯಯಗಳಲ್ಲಿ ಶೇ.85ರಷ್ಟು ಇಳಿಕೆಯಾಗಿದೆ.
ಕೆಪಿಟಿಸಿಎಲ್ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆ ಪ್ರಕಾರ, 11 ಸಾವಿರಕ್ಕೂ ಹೆಚ್ಚು ಪ್ರಸರಣ ಟವರ್ಗಳನ್ನು ಪರಿಶೀಲಿಸಲಾಗಿದ್ದು, 1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ದೋಷಗಳನ್ನು ಗುರುತಿಸಿ ಸರಿಪಡಿಸಲಾಗಿದೆ. ಡ್ರೋನ್ ಆಧಾರಿತ ಮೇಲ್ವಿಚಾರಣೆಯಿಂದ ವಿದ್ಯುತ್ ಜಾಲದ ವಿಶ್ವಾಸಾರ್ಹತೆ ಗಮನಾರ್ಹವಾಗಿ ಹೆಚ್ಚಿದೆ.
ಗುಡ್ಡಗಾಡು ಪ್ರದೇಶಗಳು, ದಟ್ಟ ಅರಣ್ಯಗಳು ಹಾಗೂ ಅಪಾಯಕಾರಿಯಾದ ಸ್ಥಳಗಳಲ್ಲಿ ಮಾನವೀಯ ಪರಿಶೀಲನೆಯ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ಸಿಬ್ಬಂದಿಯ ಸುರಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಈ ತಂತ್ರಜ್ಞಾನ ಮಹತ್ವದ ಪಾತ್ರವಹಿಸಿದೆ ಎಂದು ನಿಗಮ ತಿಳಿಸಿದೆ.
ಹೈ ರೆಸಲ್ಯೂಷನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ ವ್ಯವಸ್ಥೆ ಹಾಗೂ ಲೈಡಾರ್ (LiDAR) ಸೆನ್ಸರ್ಗಳನ್ನು ಹೊಂದಿರುವ ಡ್ರೋನ್ಗಳು ಪ್ರಸರಣ ಟವರ್ಗಳು, ವಾಹಕಗಳು (Conductors) ಹಾಗೂ ಇನ್ಸುಲೇಟರ್ಗಳ ಸಮೀಪದ ಪರಿಶೀಲನೆಯನ್ನು ಅತ್ಯಂತ ನಿಖರವಾಗಿ ನಡೆಸುತ್ತಿವೆ. ಸಾಂಪ್ರದಾಯಿಕ ವಿಧಾನಗಳಿಂದ ಪತ್ತೆಹಚ್ಚಲು ಕಷ್ಟವಾಗುವ ಸಣ್ಣ ದೋಷಗಳನ್ನೂ ಈ ತಂತ್ರಜ್ಞಾನ ಗುರುತಿಸಲು ಸಾಧ್ಯವಾಗುತ್ತಿದೆ.
ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳು ಸಡಿಲ ವಿದ್ಯುತ್ ಸಂಪರ್ಕಗಳು ಅಥವಾ ಉಪಕರಣಗಳ ಹಾನಿಯಿಂದ ಉಂಟಾಗುವ ಅಸಾಮಾನ್ಯ ಉಷ್ಣಾಂಶವನ್ನು ಮುಂಚಿತವಾಗಿಯೇ ಪತ್ತೆಹಚ್ಚುವ ಮೂಲಕ ದೋಷಗಳು ದೊಡ್ಡ ಸಮಸ್ಯೆಯಾಗುವ ಮೊದಲು ತಡೆಗಟ್ಟುವ ನಿರ್ವಹಣೆಗೆ ನೆರವಾಗುತ್ತಿವೆ.
ಡ್ರೋನ್ ಸಮೀಕ್ಷೆಯಿಂದ ಸಂಗ್ರಹವಾಗುವ ಮಾಹಿತಿಯನ್ನು ಕೆಪಿಟಿಸಿಎಲ್ನ ಡಿಜಿಟಲ್ ಆಸ್ತಿ ನಿರ್ವಹಣಾ ವ್ಯವಸ್ಥೆಗೆ ಸಂಯೋಜಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ಡಿಜಿಟಲ್ ಟ್ವಿನ್ (Digital Twin) ಪ್ಲಾಟ್ಫಾರ್ಮ್ ಜೊತೆ ಜೋಡಣೆ ಮಾಡಿ ಎನರ್ಜಿ ಭವನದ ಕೇಂದ್ರ ನಿಯಂತ್ರಣ ಕೊಠಡಿಯಿಂದಲೇ ವಿದ್ಯುತ್ ಪ್ರಸರಣ ಜಾಲವನ್ನು ತಕ್ಷಣದ (ರಿಯಲ್ ಟೈಮ್) ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಮುನ್ನೆಚ್ಚರಿಕಾ ನಿರ್ವಹಣೆಯತ್ತ ಹೆಜ್ಜೆ
ಡ್ರೋನ್ ತಂತ್ರಜ್ಞಾನ ಬಳಕೆಯಿಂದ ಪ್ರಸರಣ ಮಾರ್ಗಗಳ ನಿರ್ವಹಣೆ ಪ್ರತಿಕ್ರಿಯಾತ್ಮಕ (Reactive) ಮಾದರಿಯಿಂದ ಮುನ್ನೆಚ್ಚರಿಕಾ (Predictive) ಹಾಗೂ ಡೇಟಾ ಆಧಾರಿತ ನಿರ್ವಹಣಾ ಮಾದರಿಯತ್ತ ಪರಿವರ್ತನೆಯಾಗಿದೆ ಎಂದು ಕೆಪಿಟಿಸಿಎಲ್ ತಿಳಿಸಿದೆ.
ಯೋಜನೆಯ ಪ್ರಮುಖ ಸಾಧನೆಗಳು:
- ವಿದ್ಯುತ್ ಪ್ರಸರಣಕ್ಕೆ ಸಂಬಂಧಿಸಿದ ವಿದ್ಯುತ್ ವ್ಯತ್ಯಯಗಳಲ್ಲಿ ಶೇ.85ರಷ್ಟು ಇಳಿಕೆ, ಪರಿಶೀಲನೆಗೊಂಡ ಮಾರ್ಗಗಳಲ್ಲಿ ವ್ಯತ್ಯಯಗಳ ಸಂಖ್ಯೆ 519ರಿಂದ ಕೇವಲ 73ಕ್ಕೆ ಇಳಿಕೆ.
- 3,370 ಕಿಲೋಮೀಟರ್ಗಿಂತ ಹೆಚ್ಚು ಪ್ರಸರಣ ಮಾರ್ಗಗಳ ಪರಿಶೀಲನೆ, ಇದರಲ್ಲಿ 2,500 ಕಿ.ಮೀ.ಗೂ ಹೆಚ್ಚು 220 ಕೆವಿ ಮಾರ್ಗಗಳು ಹಾಗೂ 843 ಕಿ.ಮೀ. 400 ಕೆವಿ ಪ್ರಸರಣ ಮಾರ್ಗಗಳು ಸೇರಿವೆ.
- 11 ಸಾವಿರಕ್ಕೂ ಹೆಚ್ಚು ಪ್ರಸರಣ ಟವರ್ಗಳು ಮತ್ತು ಸ್ಪ್ಯಾನ್ಗಳ ಸಮಗ್ರ ಪರಿಶೀಲನೆ.
- 1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ದೋಷಗಳನ್ನು ಡಿಜಿಟಲ್ ಮೂಲಕ ಗುರುತಿಸಿ ದಾಖಲಿಸುವ ಮೂಲಕ, ವೆಬ್ ಪ್ಲಾಟ್ಫಾರ್ಮ್ ಹಾಗೂ ಮೊಬೈಲ್ ಆ್ಯಪ್ಗಳ ಮೂಲಕ ದೋಷ ಪರಿಹಾರ ಕಾರ್ಯವನ್ನು ರಿಯಲ್ ಟೈಮ್ನಲ್ಲಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ.
- ಐದು ಸಂಯೋಜಿತ ನಿರ್ವಹಣಾ ಅವಧಿಗಳಲ್ಲಿ 200ಕ್ಕೂ ಹೆಚ್ಚು ಗಂಭೀರ ದೋಷಗಳ ಪರಿಹಾರ, ಇದರಿಂದ ಕಾರ್ಯಾಚರಣೆಯ ವ್ಯತ್ಯಯ ಕಡಿಮೆಯಾಗಿ ನಿರ್ವಹಣಾ ಕಾರ್ಯಕ್ಷಮತೆ ಹೆಚ್ಚಳ.
ಈ ಯೋಜೆಯಡಿ ಅಭಿವೃದ್ಧಿಪಡಿಸಿರುವ ಡಿಜಿಟಲ್ ಡೇಟಾ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಕೆಪಿಟಿಸಿಎಲ್ನ GIS ಹಾಗೂ ERP ಪ್ಲಾಟ್ಫಾರ್ಮ್ಗಳೊಂದಿಗೆ ಸಂಯೋಜಿಸಿ ವಿದ್ಯುತ್ ಪ್ರಸರಣ ಆಸ್ತಿಗಳ ಏಕೀಕೃತ ಡಿಜಿಟಲ್ ನಿರ್ವಹಣಾ ವ್ಯವಸ್ಥೆ ರೂಪಿಸುವ ಉದ್ದೇಶವಿದೆ.
ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಈ ಯೋಜೆಯನ್ನು ಕೆಪಿಟಿಸಿಎಲ್ನ ಡಿಜಿಟಲ್ ಪರಿವರ್ತನೆಯ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು.
“ಕರ್ನಾಟಕದ ಸುಮಾರು 45 ಸಾವಿರ ಕಿಲೋಮೀಟರ್ ಉದ್ದದ ವಿದ್ಯುತ್ ಪ್ರಸರಣ ಜಾಲವನ್ನು ಸಾಂಪ್ರದಾಯಿಕ ವಿಧಾನಗಳಿಂದ ಪರಿಶೀಲಿಸುವುದು ಸಮಯ ಹಿಡಿಯುವ ಹಾಗೂ ಸವಾಲಿನ ಕೆಲಸ. ಥರ್ಮಲ್ ಇಮೇಜಿಂಗ್ ಮತ್ತು ಲೈಡಾರ್ ತಂತ್ರಜ್ಞಾನ ಹೊಂದಿದ ಡ್ರೋನ್ಗಳ ಮೂಲಕ ಈಗ ಅತಿ ಕಡಿಮೆ ಸಮಯದಲ್ಲಿ 360 ಡಿಗ್ರಿ ಪರಿಶೀಲನೆ ಸಾಧ್ಯವಾಗಿದೆ. ಕಣ್ಣಿಗೆ ಕಾಣದ ಅತಿ ಸಣ್ಣ ದೋಷಗಳನ್ನೂ ಗುರುತಿಸಲು ಸಾಧ್ಯವಾಗುತ್ತಿದ್ದು, ಪರಿಶೀಲನೆ ಆಧಾರಿತ ಕ್ರಮಗಳಿಂದ ಶೇ.85ರಷ್ಟು ವಿದ್ಯುತ್ ವ್ಯತ್ಯಯ ಕಡಿಮೆಯಾಗಿರುವುದು ಕೆಪಿಟಿಸಿಎಲ್ನ ಡಿಜಿಟಲ್ ಪರಿವರ್ತನೆಯ ಮಹತ್ವದ ಸಾಧನೆಯಾಗಿದೆ,” ಎಂದು ಅವರು ಹೇಳಿದರು.
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ದೋಷಗಳು ಸಂಭವಿಸಿದ ನಂತರ ಸರಿಪಡಿಸುವ ವ್ಯವಸ್ಥೆಯಿಂದ ಅಪಾಯಗಳನ್ನು ಮುಂಚಿತವಾಗಿ ಗುರುತಿಸಿ ತಡೆಗಟ್ಟುವ ನಿರ್ವಹಣಾ ಮಾದರಿಯತ್ತ ಕೆಪಿಟಿಸಿಎಲ್ ಸಾಗುತ್ತಿದೆ ಎಂದರು.
“ಈ ಮುನ್ನೆಚ್ಚರಿಕಾ ನಿರ್ವಹಣಾ ಮಾದರಿಯಿಂದ ಕರ್ನಾಟಕದ ವಿದ್ಯುತ್ ಪ್ರಸರಣ ಜಾಲ ಇನ್ನಷ್ಟು ಸದೃಢ ಮತ್ತು ವಿಶ್ವಾಸಾರ್ಹವಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ರೈತರು, ಕೈಗಾರಿಕೆಗಳು ಹಾಗೂ ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸುವ ಜೊತೆಗೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆಯನ್ನೂ ಹೆಚ್ಚಿಸಲಾಗುತ್ತಿದೆ,” ಎಂದು ಅವರು ಹೇಳಿದರು.