ಬೆಂಗಳೂರು:
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಅಂಗೀಕರಿ ಸಲ್ಪಟ್ಟ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ (ಗೋಹತ್ಯೆ ನಿಷೇಧ ಮಸೂದೆ) ವಿಧಾನಪರಿಷತ್‌ನಲ್ಲಿ ತಡೆಯಾಗಿದ್ದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಗೋಹತ್ಯೆ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಮಹತ್ವದ ತೀರ್ಮಾ ನವನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ. ಮಂಗಳವಾರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ವಿಧೇಯಕಕ್ಕೆ ತಕ್ಷಣವೇ ಜೀವ ನೀಡುವ ಉದ್ದೇಶದಿಂದ ಸುಗ್ರೀವಾಜ್ಞೆ ತರಲು ತೀರ್ಮಾನಿಸಲಾಗಿದೆ.ರಾಜ್ಯಪಾಲರ ಒಪ್ಪಿಗೆಗಾಗಿ ಮಂಗಳವಾರವೇ ಕಳುಹಿಸಿ ಕೊಡಲಿದೆ.ರಾಜ್ಯಪಾಲರು ಸಹಿ ಆಗುತ್ತಿದ್ದಂತೆ ತಕ್ಷಣವೇ ಸುಗ್ರೀವಾಜ್ಞೆ ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ,ರಾಜ್ಯದಲ್ಲಿ ಗೋಹತ್ಯೆ ನಿಷೇಧ ಸಂಬಂಧ ಹೊಸ ಕಾಯ್ದೆ ಜಾರಿಯಾದರೆ ಎಮ್ಮೆ,ಕೋಣದ ಮಾಂಸ ಮಾರಾಟಕ್ಕೆ ಸಮಸ್ಯೆಯಾಗಲಿದೆ ಎಂಬ ಭಾವನೆ ಇದೆ.ಆದರೆ,ಇದು ಸತ್ಯಕ್ಕೆ ದೂರವಾದುದು.
ಎಮ್ಮೆ,ಕೋಣದ ಮಾಂಸ ಮಾರಾಟಕ್ಕೆ ಯಾವುದೇ ನಿಷೇಧ ಹೇರಿಲ್ಲ.ಹಸುವಿನ ವಧೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಲ್ಲದೇ, ಚರ್ಮೋದ್ಯಮಕ್ಕೂ ಹೊಸ ಕಾಯ್ದೆಯಿಂದ ಸಮಸ್ಯೆಯಾಗುವುದಿಲ್ಲ ಎಂದು ಮಾಹಿತಿ ನೀಡಿದರು. UNI