ಚಿಕ್ಕಮಗಳೂರು:
ವಿಧಾನಪರಿಷತ್ ಉಪಸಭಾಪತಿ ಹಾಗೂ ಜೆಡಿಎಸ್ ಸದಸ್ಯ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಅವರು ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ. ನಿನ್ನೆ ತಡರಾತ್ರಿ ಕಡೂರು ತಾಲೂಕು ಬಳಿ ರೈಲ್ವೆ ಹಳಿಯಲ್ಲಿ ಅವರ ರುಂಡ ಮುಂಡ ಬೇರ್ಪಟ್ಟ ದೇಹ ಪತ್ತೆಯಾಗಿದೆ.
ಅವರು ಪತ್ನಿ ಮಮತಾ, ಮಗ ಸೋನಾಲ್, ಮಗಳು ಸೋನಾಲಿ ಸೇರಿದಂತೆ ಅಪಾರ ಬಂಧುಬಳಗವನ್ನು,. ಅಭಿಮಾನಿಗಳನ್ನು ಅಗಲಿದ್ದಾರೆ.
ಸಖರಾಯಪಟ್ಟಣದಿಂದ ಸಂಜೆ 6:30ಕ್ಕೆ ಖಾಸಗಿ ಡ್ರೈವರ್ ಜೊತೆ ಕಾರಿನಲ್ಲಿ ಹೊರಟ ಅವರು ಕಡೂರು ತಾಲೂಕು ಗುಣಸಾಗರ ಬಳಿ ಕಾರು ನಿಲ್ಲಿಸಿದ್ದಾರೆ. ತಮ್ಮ ಎಸ್ಕಾರ್ಟ್ ಸಿಬ್ಬಂದಿಯನ್ನು ಅಲ್ಲಿಯೇ ಬಿಟ್ಟು ಖಾಸಗಿ ಡ್ರೈವರ್ ಜೊತೆ ಅವರು ಹೊರಟಿದ್ದರು. ಒಬ್ಬ ವ್ಯಕ್ತಿಯ ಜೊತೆ ಸ್ವಲ್ಪ ಕೆಲಸ ಇದ್ದು ಹೋಗಿ ಬರುತ್ತೇನೆ ಎಂದು ಹೇಳಿ ಹೋದರೆನ್ನಲಾಗಿದೆ. ನಂತರ ಕಡೂರಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಶತಾಬ್ದಿ ಎಕ್ಸ್ಪ್ರೆಸ್ ಬರುವ ಸಮಯ ವಿಚಾರಿಸಿದರೆನ್ನಲಾಗಿದೆ.
ಇತ್ತೀಚೆಗೆ ವಿಧಾನಪರಿಷತ್ನಲ್ಲಿ ನಡೆದ ಗಲಾಟೆ ಘಟನೆ ಧರ್ಮೇಗೌಡ ಅವರ ಮನಸಿಗೆ ಘಾಸಿ ತಂದಿತ್ತು. ಸಭಾಪತಿ ಪೀಠದ ಮೇಲೆ ಕುಳಿತಿದ್ದ ಅವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಇದು ಅವರಿಗೆ ಬಹಳ ನೋವು ತಂದಿತ್ತು. ಮಾಧ್ಯಮಗಳ ಮುಂದೆ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಹೋದರೂ ತಮ್ಮ ಆಪ್ತವಲಯದಲ್ಲಿ ಸಾಕಷ್ಟು ನೋವು ತೋಡಿಕೊಂಡಿದ್ದರು.