'ಆಹಾರ ನಷ್ಟ ಕಡಿಮೆ ಮಾಡುವುದು, ಕರ್ನಾಟಕದ ಆಹಾರ ವ್ಯವಸ್ಥೆ ಬಲಪಡಿಸುವುದು' ಘೋಷವಾಕ್ಯದ ಅಡಿ ನಡೆದ ಸನ್ಮಾನ ಸಮಾರಂಭ; ವಾರ್ತಾ ಇಲಾಖೆ ಪ್ರಕಟಣೆಯ ಜೊತೆಗೆ ಹಂಚಿಕೊಂಡ ಚಿತ್ರ. ಚಿತ್ರ: ವಾರ್ತಾ ಇಲಾಖೆ
ಬೆಂಗಳೂರು: ತೋಟಗಾರಿಕಾ ಉತ್ಪನ್ನಗಳ ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಮತ್ತು ರೈತರ ಆದಾಯ ಹೆಚ್ಚಿಸಲು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ನಡೆಸಿದ ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026’ರ ಅಂತಿಮ ಸುತ್ತಿನಲ್ಲಿ ಏಳು ನವೀನ ಕೃಷಿ-ತಂತ್ರಜ್ಞಾನ ಪರಿಹಾರಗಳನ್ನು ಗುರುತಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ಹೇಳಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ನಡೆದ ‘ಬೆಂಗಳೂರು ಟೆಕ್ ಸಮ್ಮಿಟ್ 2026’ರ ಸಮಾರೋಪ ಸಮಾರಂಭದಲ್ಲಿ ಈ ಆಯ್ಕೆಯನ್ನು ಪ್ರಕಟಿಸಲಾಗಿದೆ.
ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಮಾವು, ಬಾಳೆ, ಟೊಮೆಟೊ, ದ್ರಾಕ್ಷಿ, ದಾಳಿಂಬೆ ಮತ್ತು ಅನಾನಸ್‌ಗಳ ವಾರ್ಷಿಕ ಉತ್ಪಾದನಾ ಮೌಲ್ಯ ಸುಮಾರು ₹22,000 ಕೋಟಿ ಎಂದು ಪ್ರಕಟಣೆ ತಿಳಿಸಿದೆ. ಆದರೆ ಸೂಕ್ತ ಶೀತಲ ಸಂಗ್ರಹಣೆ, ಪ್ಯಾಕೇಜಿಂಗ್, ಸಾಗಣೆ ಹಾಗೂ ಸಂಸ್ಕರಣಾ ಘಟಕಗಳ ಕೊರತೆಯಿಂದ ಶೇ. 10ರಿಂದ 15ರಷ್ಟು ಉತ್ಪನ್ನಗಳು ಮೌಲ್ಯ ಸರಪಳಿಯ ವಿವಿಧ ಹಂತಗಳಲ್ಲಿ ನಷ್ಟವಾಗುತ್ತಿವೆ. ಈ ನಷ್ಟವನ್ನು ತಡೆಗಟ್ಟಿ ರೈತರಿಗೆ ಉತ್ತಮ ಆರ್ಥಿಕ ಪ್ರತಿಫಲ ದೊರಕಿಸಲು ಹಾಗೂ ಮುಖ್ಯಮಂತ್ರಿಗಳ ‘ಬಿಯಾಂಡ್ ಬೆಂಗಳೂರು’ ಕರೆಗೆ ಪೂರಕವಾಗಿ ಈ ಚಾಲೆಂಜ್ ಆಯೋಜಿಸಲಾಗಿತ್ತು ಎಂದು ಮುಖ್ಯ ಕಾರ್ಯದರ್ಶಿ ಹೇಳಿದರು.
ದೇಶಾದ್ಯಂತ ನಾವೀನ್ಯಕಾರರು ಮತ್ತು ನವೋದ್ಯಮಗಳಿಂದ ಬಂದ ಒಟ್ಟು 210 ಅರ್ಜಿಗಳನ್ನು ಪರಿಶೀಲಿಸಿ, ತಜ್ಞರ ಮೌಲ್ಯಮಾಪನದ ಬಳಿಕ ಏಳು ವಿಜೇತ ಪರಿಹಾರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆಯ್ಕೆಯಾದ ಏಳು ಪರಿಹಾರಗಳು: ಅಚ್ಯುತ ಇನ್ನೋವೇಶನ್ಸ್ (Achyutha Innovations): ಉತ್ಪನ್ನಗಳ ದೃಢತೆ ಮತ್ತು ಬಾಳಿಕೆಯ ಅವಧಿ ಹೆಚ್ಚಿಸುವ ಬೆಳೆ ನಿರ್ದಿಷ್ಟ ಕೊಯ್ಲು ಪೂರ್ವ ವಿಧಾನ ‘ರೈಪ್ ಅಂಡ್ ಸ್ಟೇ ಫಿಟ್’; ದ್ವಾರಾ ಇ-ರಿಜಿಸ್ಟ್ರಿ (Dvara E-Registry): ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ (FPO) ಸುಲಭವಾಗಿ ಸಾಂಸ್ಥಿಕ ಹಣಕಾಸು ಸೌಲಭ್ಯ ಒದಗಿಸುವ ಪರ್ಯಾಯ ಸಾಲ ಮೌಲ್ಯಮಾಪನ ವ್ಯವಸ್ಥೆ ‘ಖೇತ್‌ಸ್ಕೋರ್’; ಇಕೋ365 (Eco365): ಮಣ್ಣಿನಲ್ಲಿ ಜೈವಿಕವಾಗಿ ಕರಗುವ ಬೆಳೆ ಆಧಾರಿತ ಪ್ಯಾಕೇಜಿಂಗ್ ವ್ಯವಸ್ಥೆ ‘ಫ್ರೆಕ್ಸಾ’; ಕಾಶಿಕರಿ ಟೆಕ್ಸ್‌ಟೈಲ್ಸ್ (Kashikari Textiles): ಅನಾನಸ್ ಎಲೆಗಳಿಂದ ನಾರು ಮತ್ತು ಜವಳಿ ಉತ್ಪನ್ನ ತಯಾರಿಸುವ ವೃತ್ತಾಕಾರದ ಆರ್ಥಿಕತೆ ತಂತ್ರಜ್ಞಾನ; ರೂಟ್ಸ್‌ಗೂಡ್ಸ್ (RootsGoods): ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಾಗಣೆ ಮತ್ತು ವ್ಯಾಪಾರಕ್ಕಾಗಿ ಡಿಜಿಟಲ್ ಗುಣಮಟ್ಟದ ಮೌಲ್ಯಮಾಪನ ಒದಗಿಸುವ ಸಂಗ್ರಹಣಾ ವೇದಿಕೆ; ರುಕಾರ್ಟ್ ಟೆಕ್ನಾಲಜೀಸ್ (Rukart Technologies): ಕಡಿಮೆ ವಿದ್ಯುತ್ ಬಳಕೆಯ ಶೀತಲೀಕರಣ ‘ಸಬ್ಜಿ ಕೂಲರ್’ ಹಾಗೂ ನೈಸರ್ಗಿಕವಾಗಿ ಹಣ್ಣು ಮಾಗಿಸುವ ಪರಿಹಾರಗಳು; ಎಕ್ಸಿಂಪಲ್ ಟೆಕ್ನಾಲಜೀಸ್ (Eximple Technologies): ರಫ್ತು ಸಾಗಣೆ, ನಿಯಮಾನುಸರಣೆ ಮತ್ತು ವ್ಯಾಪಾರ ಹಣಕಾಸು ಪ್ರಕ್ರಿಯೆಗಳನ್ನು ನಿರ್ವಹಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ವೇದಿಕೆ.
“ಆಹಾರ ನಷ್ಟ ತಡೆಯಲು ಸರ್ಕಾರ, ರೈತ ಸಂಸ್ಥೆಗಳು, ಸಂಶೋಧಕರು ಮತ್ತು ಹೂಡಿಕೆದಾರರ ಸಂಘಟಿತ ಪ್ರಯತ್ನ ಅಗತ್ಯ. ಗುರುತಿಸಲಾದ ಈ ಭರವಸೆಯ ಪರಿಹಾರಗಳನ್ನು ಮೌಲ್ಯಮಾಪನ ಮತ್ತು ಪ್ರಾಯೋಗಿಕ ಅನುಷ್ಠಾನದ ಅವಕಾಶಗಳೊಂದಿಗೆ ಜೋಡಿಸುವುದೇ ಈ ಉಪಕ್ರಮದ ನೈಜ ಯಶಸ್ಸಾಗಲಿದೆ” ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು.
ಪ್ರಕಟಣೆಯಲ್ಲಿ GAIN ಭಾರತದ ಕಂಟ್ರಿ ಡೈರೆಕ್ಟರ್ ಭುವನೇಶ್ವರಿ ಬಾಲಸುಬ್ರಮಣಿಯನ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಗಿರೀಶ್ (ಐಎಎಸ್) ಹಾಗೂ Thinkthrough Consulting ಸಂಸ್ಥಾಪಕಿ ಮತ್ತು ABWCI ಅಧ್ಯಕ್ಷೆ ಡಾ. ಪಾರುಲ್ ಸೋನಿ ಅವರ ಅನಿಸಿಕೆಗಳೂ ಇವೆ.
ತೋಟಗಾರಿಕೆ ಇಲಾಖೆಯ ಆತಿಥ್ಯದಲ್ಲಿ ‘ಗ್ಲೋಬಲ್ ಅಲೈಯನ್ಸ್ ಫಾರ್ ಇಂಪ್ರೂವ್ಡ್ ನ್ಯೂಟ್ರಿಷನ್’ (GAIN), ನ್ಯೂಟ್ರಿಷನ್ ಕನೆಕ್ಟ್, ಥಿಂಕ್‌ಥ್ರೂ ಕನ್ಸಲ್ಟಿಂಗ್ ಮತ್ತು ABWCI ಸಂಸ್ಥೆಗಳು ಜಂಟಿಯಾಗಿ ‘ಸಂಪೂರ್ಣ 2026’ ವೇದಿಕೆಯನ್ನು ರೂಪಿಸಿವೆ; ಎಂಎಂ ಆಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಮತ್ತು ಕೃಷಿಕಲ್ಪ ಫೌಂಡೇಶನ್ ಬೆಂಬಲ ನೀಡಿವೆ. ಮುಂದಿನ ಹಂತದಲ್ಲಿ ಈ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅಳವಡಿಸಲು ಸೂಕ್ತ ಪಾಲುದಾರಿಕೆ ಮತ್ತು ಮಾರ್ಗಗಳನ್ನು ಅನ್ವೇಷಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.
ಇದಕ್ಕೂ ಮುನ್ನ, ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ವಿದ್ಯಾರ್ಥಿಗಳನ್ನು ಸೆಳೆದ ಕೆಸ್ಟೆಪ್ಸ್ ಮಳಿಗೆ.
