Home ಬೆಂಗಳೂರು ನಗರ ಓಲಾ ಕ್ಯಾಬ್‌ ಮೂಲಕ ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ

ಓಲಾ ಕ್ಯಾಬ್‌ ಮೂಲಕ ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ

106
0

ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಡಿಸಿಎಂ ಡಾ.ಅಶ್ವತ್ಥನಾರಾಯಣ, ಗಿವ್‌ ಇಂಡಿಯಾ, ಓಲಾ ಸಹಕಾರ

ಬೆಂಗಳೂರು:

ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬುಧವಾರ ಚಾಲನೆ ನೀಡಿದರು.

ಮೊದಲು ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರಕಾರದ ಜತೆ ಗಿವ್‌ ಇಂಡಿಯಾ ಹಾಗೂ ಓಲಾ ಕ್ಯಾಬ್‌ ಕಂಪನಿಗಳು ಕೈಜೋಡಿಸಿವೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, “ಇಡೀ ರಾಜ್ಯದಲ್ಲಿಯೇ ಮೊತ್ತ ಮೊದಲಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸವನ್ನು ನಾನು ಆರಂಭ ಮಾಡಿದೆ. ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿತು. ಈಗ ಇಡೀ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಅದಕ್ಕೆ ಓಲಾ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ” ಎಂದರು.

DCm Ola Cab to make home delivery Oxygen Concentrators in Bengaluru

ಹೋಮ್‌ ಐಸೋಲೇಷನ್‌ ಆಗಿರುವ ಯಾರೇ ಸೋಂಕಿತರಲ್ಲಿ ಆಮ್ಲಜನಕದ ಸ್ಯಾಚುರೇಶನ್ ಮಟ್ಟವು 94% ಗಿಂತ ಕಡಿಮೆ ಇದ್ದರೆ ಅಂಥವರಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುವುದು. ಅವರು ಓಲಾ ಆಪ್‌ ಮೂಲಕ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿದ 30 ನಿಮಿಷದೊಳಗೆ ಅವರಿಗೆ ತಲುಪುತ್ತದೆ. ಸೋಂಕಿತರು 5,000 ರೂ. ಭದ್ರತಾ ಠೇವಣಿ (ಡಿಜಿಟಲ್‌ ಮೂಲಕ) ಇಟ್ಟು ಇವುಗಳನ್ನು ಪಡೆಯಬೇಕು. ಈ ಸಾಂದ್ರಕಗಳನ್ನು ವಾಪಸ್‌ ಪಡೆಯುವಾಗ ಈ ಮೊತ್ತವನ್ನು ಹಿಂತಿರುಗಿಸಲಾಗುವುದು. ಜತೆಗೆ, ಸೋಂಕಿತರಿಗೆ ಈ ಯಂತ್ರವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನೂ ಹೇಳಿಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

ಸದ್ಯಕ್ಕೆ 500 ಆಮ್ಲಜನಕ ಸಾಂದ್ರಕಗಳ ಮೂಲಕ ಈ ನೆಟ್‌ವರ್ಕ್‌ ಮಾಡಲಾಗಿದೆ. ಇವತ್ತು ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ವಿದ್ಯುಕ್ತವಾಗಿ ಆರಂಭ ಮಾಡಲಾಗಿದೆ. ಕ್ರಮೇಣ ಮತ್ತಷ್ಟು ಪ್ರಮಾಣದಲ್ಲಿ ವಿಸ್ತರಣೆ ಮಾಡಲಾಗುವುದು. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಇದರ ಜತೆಯಲ್ಲೇ ಟೆಲಿಕನ್ಸಲ್‌ಟೆನ್ಸಿ ಕೊಡುವ ಚಿಂತನೆಯೂ ಇದೆ. ಅಗತ್ಯಬಿದ್ದರೆ ಅಂಥ ಸೋಂಕಿತರಿಗೆ ಔಷಧೋಪಾಚಾರವನ್ನೂ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಓಲಾ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್‌ ಪೋರ್‌ವಾಲ್‌ ಮಾತನಾಡಿ, ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರದ ಜತೆ ಕೈಜೋಡಿಸಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಈ ಯೋಜನೆಯನ್ನು ಬೆಂಗಳೂರು ‌ಮಾತ್ರವಲ್ಲದೆ, ಇಡೀ ದೇಶದಲ್ಲಿ ವಿಸ್ತರಿಸಲಾಗುವುದು. 10,000 ಆಮ್ಲಜನಕ ಸಾಂದ್ರಕಗಳನ್ನು ಜನ ಬಳಕೆ ನೀಡುವ ಉದ್ದೇಶ ಇದೆ‌ ಎಂದರು.

ಗಿವ್‌ ಇಂಡಿಯಾದ ಸರ್ಕಾರದ ಜತೆಗಿನ ಪಾಲುದಾರಿಕೆಯ ವ್ಯವಸ್ಥಾಪಕ‌ ನಿರ್ದೇಶಕ ಕೆ.ಪಿ.ವಿನೋದ್‌ ಮಾತನಾಡಿ, ಸರ್ಕಾರ ಮತ್ತು ಓಲಾ ಜತೆಗೆ ಗೀವ್ ಇಂಡಿಯಾ ಸೇರಿ‌ ಕೆಲಸ‌ ಮಾಡುತ್ತಿರುವುದು ಖುಷಿಯ ವಿಚಾರ. ಮೊದಲ ಹಂತದಲ್ಲಿ 500 ಸಾಂದ್ರಕ ಕೊಡುತ್ತಿದ್ದು  ಅಗತ್ಯ ನೋಡಿಕೊಂಡು ಇನ್ನೂ ಹೆಚ್ವು ಸರಬರಾಜು ಮಾಡಲಾಗುವುದು ಎಂದರು.

ಗೀವ್ ಇಂಡಿಯಾ, ಓಲಾ ಜತೆ ಸಂಯೋಜನೆಯ ಕೆಲಸ‌ ಮಾಡಿದ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here