ನಾಗರಿಕರಿಗೆ ಶೀಘ್ರದಲ್ಲೇ ಆನ್ಲೈನ್ ಖಾತಾ ತಿದ್ದುಪಡಿ ಸೌಲಭ್ಯ; ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಣೆ: ಮುನೀಶ್ ಮೌದ್ಗಿಲ್
ಬೆಂಗಳೂರು: ನಾಗರಿಕರಿಗೆ ಸುಲಭ ಮತ್ತು ಪರಿಣಾಮಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಶೀಘ್ರದಲ್ಲೇ ಆನ್ಲೈನ್ ಖಾತಾ ತಿದ್ದುಪಡಿ ಸೌಲಭ್ಯವನ್ನು ಪರಿಚಯಿಸಲು ಸಿದ್ಧವಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೊಸ ವ್ಯವಸ್ಥೆಯಿಂದ ನಾಗರಿಕರು ತಮ್ಮ ಖಾತಾ ವಿವರಗಳಲ್ಲಿ ಇರುವ ದೋಷಗಳನ್ನು ಯಾವುದೇ ವಿಳಂಬವಿಲ್ಲದೆ ಸ್ವತಃ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವ್ಯವಸ್ಥೆ ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಹಾಗೂ ಬಳಕೆದಾರ ಸ್ನೇಹಿಯಾಗಲಿದೆ ಎಂದು ಹೇಳಿದರು.
ಮಾಲೀಕರ ಹೆಸರು ಮತ್ತು ಆಸ್ತಿಯ ಅಳತೆಂತಹ ಪ್ರಮುಖ ವಿವರಗಳನ್ನು ಹೊರತುಪಡಿಸಿ, ಸ್ಥಳ, ವಾರ್ಡ್ ಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ನಾಗರಿಕರು ಆನ್ಲೈನ್ ಮೂಲಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದರಿಂದ ಕಚೇರಿಗಳ ಸುತ್ತಾಟ ಕಡಿಮೆಯಾಗುವ ನಿರೀಕ್ಷೆಯಿದೆ.
ಇ-ಖಾತಾ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿದ ಅವರು, ಇದುವರೆಗೆ ಸುಮಾರು 25 ಲಕ್ಷ ಡ್ರಾಫ್ಟ್ ಖಾತಾ ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಅಂತಿಮ ಇ-ಖಾತಾ ವಿತರಿಸಲಾಗಿದೆ ಎಂದು ಹೇಳಿದರು. ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಸರಾಸರಿ ಐದು ದಿನಗಳೊಳಗೆ ಅಂತಿಮ ಖಾತಾ ನೀಡಲಾಗುತ್ತಿದೆ.
ಪ್ರತಿದಿನ 1,000 ಕ್ಕೂ ಹೆಚ್ಚು ಅರ್ಜಿಗಳು ಸ್ವೀಕರಿಸಲಾಗುತ್ತಿದ್ದು, ಸರಾಸರಿ ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಿಸಲಾಗುತ್ತಿದೆ. ಇದು ಡಿಜಿಟಲ್ ವ್ಯವಸ್ಥೆಯ ವೇಗ ಮತ್ತು ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಖಾತಾ ತಿರಸ್ಕಾರ ಸಂಬಂಧ ಕೆಲವು ಸವಾಲುಗಳು ಕಂಡುಬಂದ ಹಿನ್ನೆಲೆಯಲ್ಲಿ, ರಿಜೆಕ್ಷನ್ ಆಡಿಟ್ ತಂಡವನ್ನು ರಚಿಸಲಾಗಿದೆ. ಈ ತಂಡವು ತಿರಸ್ಕೃತ ಅರ್ಜಿಗಳನ್ನು ಮರುಪರಿಶೀಲಿಸಿ, ತಿದ್ದುಪಡಿ ಬಳಿಕ ಅವುಗಳನ್ನು ಮಂಜೂರು ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.
ಇನ್ನು ಮ್ಯೂಟೇಷನ್ ಪ್ರಕ್ರಿಯೆಯಲ್ಲಿ ವಿಳಂಬ ಕಡಿಮೆ ಮಾಡಲು ಸ್ವಯಂಚಾಲಿತ ಮ್ಯೂಟೇಷನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಉಪ-ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ವ್ಯವಹಾರಗಳ ನಂತರ ಸ್ವಯಂಚಾಲಿತವಾಗಿ ಮ್ಯೂಟೇಷನ್ ಪ್ರಕ್ರಿಯೆ ಆರಂಭವಾಗುತ್ತದೆ. ನೋಟಿಸ್ ಅವಧಿ ಪೂರ್ಣಗೊಂಡ ಬಳಿಕ ಮ್ಯೂಟೇಷನ್ ಪೂರ್ಣಗೊಳ್ಳುತ್ತಿದ್ದು, ಏಳನೇ ದಿನದ ನಂತರ ನಾಗರಿಕರಿಗೆ SMS ಮೂಲಕ ಮಾಹಿತಿ ನೀಡಲಾಗುತ್ತದೆ.
ಪೌತಿ (ವಾರಸುದಾರರ) ಪ್ರಕರಣಗಳಲ್ಲಿಯೂ ಈ ಸ್ವಯಂಚಾಲಿತ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದ್ದು, ಇದರಿಂದ ವಾರಸುದಾರರಿಗೆ ಖಾತಾ ವರ್ಗಾವಣೆಯಲ್ಲಿ ಆಗುವ ವಿಳಂಬ ತಪ್ಪಿಸಲು ಸಹಕಾರಿಯಾಗಲಿದೆ.
ಈ ಎಲ್ಲಾ ಕ್ರಮಗಳು ಬೆಂಗಳೂರಿನ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ನಾಗರಿಕರಿಗೆ ಸುಗಮ ಸೇವೆಯನ್ನು ಒದಗಿಸಲು ನೆರವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
