Home ಬೆಂಗಳೂರು ನಗರ ರಾಜ್ಯದ ಎಲ್ಲ ಗ್ರಾ.ಪಂ. ಗಳಲ್ಲಿ ಓಪನ್ ಜಿಮ್ ಸ್ಥಾಪಿಸಲು ರೂ. 310 ಕೋಟಿ ಪ್ರಸ್ತಾವನೆ- ಸಚಿವ...

ರಾಜ್ಯದ ಎಲ್ಲ ಗ್ರಾ.ಪಂ. ಗಳಲ್ಲಿ ಓಪನ್ ಜಿಮ್ ಸ್ಥಾಪಿಸಲು ರೂ. 310 ಕೋಟಿ ಪ್ರಸ್ತಾವನೆ- ಸಚಿವ ಡಾ. ನಾರಾಯಣಗೌಡ

61
0

ಕ್ರೀಡೆಗೆ ಮೂಲ ಸೌಕರ್ಯ ಒದಗಿಸಲು ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ 160 ಕೋಟಿ ರೂ ಪ್ರಸ್ತಾವನೆ

ಬೆಂಗಳೂರು:

ರಾಜ್ಯದಲ್ಲಿ ಕ್ರೀಡೆಗೆ ಮೂಲಸೌಲಭ್ಯಗಳನ್ನ ಒದಗಿಸಲು ಖೇಲೋ ಇಂಡಿಯಾ ಯೋಜನೆಯಡಿ ಒಟ್ಟು 160 ಕೋಟಿ ರೂ. ಅನುದಾನಕ್ಕಾಗಿ ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯಕ್ಕೆ ಆಗಮಿಸಿದ ಕೇಂದ್ರ ಕ್ರೀಡಾಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣ ಗೌಡ ಅವರು ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ವಿವರಿಸಿ, ಶೀಘ್ರವೇ ಅನುಮೋದನೆ ನೀಡಲು ಮನವಿ ಮಾಡಿದ್ರು. ಅಲ್ಲದೆ `ಫಿಟ್ ಇಂಡಿಯಾ ಅಭಿಯಾನ’ದ ಅಡಿಯಲ್ಲಿ ಹೊರಾಂಗಣ ಜಿಮ್ ಸೌಲಭ್ಯ ಒದಗಿಸಲು 310 ಕೋಟಿ ರೂ. ಅಗತ್ಯವಿದ್ದು ಕೇಂದ್ರ ಸರ್ಕಾರದ ಆರ್ಥಿಕ ನೆರವಿಗೆ ಮನವಿ ಮಾಡಿದರು.

ವಿಧಾನ ಸೌಧದಲ್ಲಿ ಕೇಂದ್ರ ಕ್ರೀಡಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಡಾ. ನಾರಾಯಣ ಗೌಡ ಅವರು ಕರ್ನಾಟಕದ ಸಾಕಷ್ಟು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ವಿ.ವಿ ಮಟ್ಟದಲ್ಲಿ ಸಾಕಷ್ಟು ಯುವ ಕ್ರೀಡಾಪಟುಗಳು ರಾಜ್ಯಕ್ಕೆ, ದೇಶಕ್ಕೆ ಹೆಸರು ತರುವ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಅಂತಹ ಯುವ ಕ್ರೀಡಾಪಟುಗಳಿಗೆ ಸಕಲ ಸೌಲಭ್ಯ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಕ್ರೀಡಾಂಗಣ, ಕ್ರೀಡಾ ಸೌಕರ್ಯ ಒದಗಿಸಬೇಕು. ಅದಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬೇಕಾಗಿದೆ.

ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ 160 ಕೋಟಿ ರೂ. ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 32 ಖೇಲೋ ಇಂಡಿಯಾ ಸೆಂಟರ್‍ಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯದ 6022 ಗ್ರಾಮ ಪಂಚಾಯತಿಗಳಲ್ಲಿ ಹೊರಾಂಗಣ ಜಿಮ್ ಸೌಲಭ್ಯ ನೀಡಲು ಕ್ರೀಯಾಯೋಜನೆ ತಯಾರಿಸಲಾಗಿದೆ. ಅದಕ್ಕೆ 310 ಕೋಟಿ ರೂ. ಅಗತ್ಯವಿದೆ. ಪ್ರಧಾನಮಂತ್ರಿಗಳ ಕನಸಿನ ಯೋಜನೆಯಾದ ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಈ ಯೋಜನೆ ಕೈಗೊಳ್ಳಲು ಅವಕಾಶವಿದ್ದು, ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಸಚಿವರು ಅಧಿಕಾರಿಗಳಿಗೆ ವಿವರಿಸಿದರು. ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ವಿಜಯಪುರದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಹಾಗೂ ಚಾಮರಾಜನಗರ, ಯಾದಗಿರಿ, ಧಾರವಾಡ ಹಾಗೂ ಬಾಗಲಕೋಟೆಯಲ್ಲಿ ಹೋಬಳಿ ಮಟ್ಟದ ಕ್ರೀಡಾಂಗಣವಿದ್ದು ತಾಲೂಕು ಮಟ್ಟದ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲು ಅಂದಾಜು ಮೊತ್ತ 16 ಕೋಟಿ ಅಗತ್ಯವಿದ್ದು, ಅನುದಾನ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Khelo India1

ಇದೇ ವೇಳೆ ರಾಷ್ಟ್ರಮಟ್ಟದ ಅಂತರರಾಜ್ಯ ವಿವಿಗಳ ಕ್ರೀಡಾಕೂಟದ ಎರಡನೇ ಆವೃತ್ತಿಯನ್ನ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ ಬಗ್ಗೆ ಸಚಿವರಿಗೆ ವಿವಿರಿಸಿದ ಅಧಿಕಾರಿಗಳು ರಾಜ್ಯಸರ್ಕಾರದ ಸಹಕಾರವನ್ನು ಕೋರಿದರು. ಓಡಿಸ್ಸಾದ ಭುವನೇಶ್ವರದಲ್ಲಿ ಮೊದಲ ಆವೃತ್ತಿ ನಡೆಸಲಾಗಿತ್ತು.

ಆಲ್ ಇಂಡಿಯಾ ಯುನಿವರ್ಸಿಟಿ ಮತ್ತು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ 2022 ರ ಫೆಬ್ರವರಿಯಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ಖೇಲೋ ಇಂಡಿಯಾ ಪ್ರಾಧಿಕಾರದ ಅಧಿಕಾರಿಗಳ ತಂಡವು ಈ ವಿಚಾರವಾಗಿ ಬೆಂಗಳೂರಿಗೆ ಆಗಮಿಸಿ, ಕ್ರೀಡಾಕೂಟ ಆಯೋಜನೆಗಾಗಿ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದೆ. ದೇಶದ ವಿವಿಧ ರಾಜ್ಯಗಳಿಂದ 150 ಯೂನಿವರ್ಸಿಟಿಗಳಿಂದ 4 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 25 ವರ್ಷದೊಳಗಿನ ಯುವಕ, ಯುವತಿಯರಿಗೆ ವಿವಿಧ ರೀತಿಯ 17 ಕ್ರೀಡೆಗಳನ್ನ ಆಯೋಜಿಸಲಾಗುತ್ತಿದೆ. ಕ್ರೀಡಾಪಟುಗಳ ತಾಂತ್ರಿಕ ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಸೇರಿ ಒಟ್ಟು 6 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಅರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಫೇನ್ಸಿಂಗ್, ಫುಟ್‍ಬಾಲ್, ಹಾಕಿ, ಜಡೊ, ಕಬ್ಬಡ್ಡಿ, ಈಜು, ವಾಲಿಬಾಲ್, ಕುಸ್ತಿ, ವೇಟ್‍ಲಿಫ್ಟಿಂಗ್, ಟೇಬಲ್ ಟೆನ್ನಿಸ್, ಟೆನ್ನಿಸ್, ಕರಾಟೆ ಕ್ರೀಡೆಗಳನ್ನ ಆಯೋಜಿಸಲಾಗಿದ್ದು,ವಿಶೇಷವಾಗಿ ಮಲ್ಲಕಂಬ ಮತ್ತು ಯೋಗಾಸನಗಳನ್ನ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಒಟ್ಟು 9 ದಿನಗಳ ಕಾಲ ಈ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆಯಲಿದೆ. ಅಥ್ಲೆಟಿಕ್ ಕ್ರೀಡೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮತ್ತು ಹಾಕಿ ಕ್ರೀಡೆಯನ್ನು ಇಲಾಖೆಯ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು.

ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಆಯೋಜನೆ ಸಂಬಂಧ ವಸತಿ, ಸಾರಿಗೆ, ಕ್ರೀಡಾ ಮೂಲಭೂತ ಸೌಕರ್ಯ, ಕ್ರೀಡಾಸಾಮಗ್ರಿ ಮತ್ತು ಊಟೋಪಚಾರ ವ್ಯವಸ್ಥೆಗಳ ಜವಾಬ್ದಾರಿ ರಾಜ್ಯ ಸರ್ಕಾರ ನಿರ್ವಹಿಸಲಿದೆ. ಕ್ರೀಡಾಕೂಟದ ಉದ್ಘಾಟನೆ, ಮುಕ್ತಾಯ ಸಮಾರಂಭ, ಭಾಗವಹಿಸುವ ಕ್ರೀಡಾಪಟುಗಳ ಆಯ್ಕೆ ಮತ್ತು ಕ್ರೀಡಾಕೂಟದ ತಾಂತ್ರಿಕ ವ್ಯವಸ್ಥೆಯನ್ನು ಭಾರತೀಯ ಕ್ರೀಡಾಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ. ಈ ಕ್ರೀಡಾಕೂಟಕ್ಕೆ ಅಗತ್ಯವಿರುವ ಕ್ರೀಡಾಮೂಲಭೂತ ಸೌಕರ್ಯಗಳಿಗಾಗಿ ರಾಜ್ಯ ಸರ್ಕಾರವು ಕೇಂದ್ರಸರ್ಕಾರಕ್ಕೆ ಅಗತ್ಯ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಿದೆ.

ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್, ಖೇಲೋ ಇಂಡಿಯಾ ಹಿರಿಯ ನಿರ್ದೇಶಕ ಸತ್ಯನಾರಾಯಣ ಮೀನಾ, ರಾಜೀಂದರ್ ಸಿಂಗ್, ಪ್ರಶಾಂತ್ ಸಿಂಗ್, ವರುಣ್ ಸಚದೇವ್, ಗೋಪಾಲ್ ಕಂಡ್ಪಾಲ್, ಹರೀಶ್ ಕೆ.ಎನ್. ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here