ರೈಲ್ವೆ ಜಾಗದಲ್ಲಿ ಅಕ್ರಮ ತ್ಯಾಜ್ಯ ಸುರಿಯುವಿಕೆ ತಡೆಗೆ ರೈಲ್ವೆ-ಜಿಬಿಎ ಜಂಟಿ ಕಾರ್ಯಯೋಜನೆa
ಬೆಂಗಳೂರು: ರೈಲ್ವೆ ಭೂಮಿ ಹಾಗೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಪರಿಶೀಲನಾ ಸಭೆ ಶನಿವಾರ ಬೆಂಗಳೂರಿನ ವಿಭಾಗೀಯ ರೈಲ್ವೆ ಕಚೇರಿಯಲ್ಲಿ ನಡೆಯಿತು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ರಾಜ್ಯದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಜಂಟಿಯಾಗಿ ಸಭೆಯ ಅಧ್ಯಕ್ಷತೆ ವಹಿಸಿದರು.
ರೈಲ್ವೆಗೆ ಸೇರಿದ ಭೂಮಿಯಲ್ಲಿ ಕಸ ಹಾಗೂ ಕಟ್ಟಡ ನಿರ್ಮಾಣದ ಅವಶೇಷಗಳನ್ನು ಅಕ್ರಮವಾಗಿ ಸುರಿಯುತ್ತಿರುವ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ರೈಲ್ವೆ ಜಾಗವನ್ನು ಸ್ವಚ್ಛವಾಗಿಡಲು ರೈಲ್ವೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡುವೆ ಸಮನ್ವಯ ಅತ್ಯಗತ್ಯ ಎಂದು ಸಚಿವರು ಅಭಿಪ್ರಾಯಪಟ್ಟರು.
ರೈಲ್ವೆ ಜಾಗದಲ್ಲಿ ಈಗಾಗಲೇ ಸುರಿಯಲಾಗಿರುವ ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಿ ಸ್ವಚ್ಛತೆ ಕಾಪಾಡಲು ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಘನ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರೈಲ್ವೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ), ಬೆಸ್ಕಾಂ ಹಾಗೂ ಇತರೆ ಸಂಬಂಧಿತ ಸಂಸ್ಥೆಗಳು ಸಾಮಾನ್ಯ ಸಮನ್ವಯ ಕಾರ್ಯವಿಧಾನದಡಿ ಕಾರ್ಯನಿರ್ವಹಿಸಬೇಕು ಎಂದು ಅವರು ನಿರ್ದೇಶಿಸಿದರು.
ರೈಲುಗಳಲ್ಲಿ ಬಯೋ-ಟಾಯ್ಲೆಟ್ ಅಳವಡಿಕೆಯಿಂದ ರೈಲ್ವೆ ನೈರ್ಮಲ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ವಿ. ಸೋಮಣ್ಣ ಹೇಳಿದರು. ರೈಲ್ವೆ ಭೂಮಿಯಲ್ಲಿ ಕಸ ಸುರಿಯುವವರ ವಿರುದ್ಧ ದಂಡ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆಯೂ ಅವರು ಸೂಚಿಸಿದರು.
ಬೆಂಗಳೂರು ನಗರವನ್ನು ತ್ಯಾಜ್ಯ ಮುಕ್ತಗೊಳಿಸುವ ಅಗತ್ಯವನ್ನು ಒತ್ತಿಹೇಳಿದ ಕೃಷ್ಣ ಬೈರೇಗೌಡ, 2026ರ ಆಗಸ್ಟ್ 1ರಿಂದ ಒಂದು ತಿಂಗಳ ಕಾಲ ನಗರಾದ್ಯಂತ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರೈಲ್ವೆ ಜಾಗದಲ್ಲಿ ಕಸ ಹಾಗೂ ಕಟ್ಟಡ ನಿರ್ಮಾಣದ ಅವಶೇಷಗಳನ್ನು ಸುರಿಯಲು ಬಳಸಲಾಗುತ್ತಿರುವ ಅನಧಿಕೃತ ಪ್ರವೇಶ ರಸ್ತೆಗಳನ್ನು ಗುರುತಿಸಿ ಅವುಗಳನ್ನು ಶಾಶ್ವತವಾಗಿ ಮುಚ್ಚುವಂತೆ ಇಬ್ಬರು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ದೀರ್ಘಕಾಲೀನ ಪರಿಹಾರಗಳನ್ನು ಜಾರಿಗೊಳಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷೆ ಮಂಜುಳಾ, ಕೆ-ರೈಡ್ ಮುಖ್ಯ ಎಂಜಿನಿಯರ್ ಲಕ್ಷ್ಮಣ್ ಸಿಂಗ್ ಹಾಗೂ ನೈಋತ್ಯ ರೈಲ್ವೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
