ರಾಮೋಹಳ್ಳಿ ಗೇಟ್ನಲ್ಲಿ ರಸ್ತೆ ಕೆಳಸೇತುವೆ ಉದ್ಘಾಟನೆ; ಸುರಕ್ಷತೆ ಮತ್ತು ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಪಡಲಿದೆ: ವಿ. ಸೋಮಣ್ಣ
ಬೆಂಗಳೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಬೆಂಗಳೂರಿನ ರಾಮೋಹಳ್ಳಿ ಗೇಟ್ನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 16ರ ಬದಲಿಗೆ ನಿರ್ಮಿಸಲಾದ ರಸ್ತೆ ಕೆಳಸೇತುವೆ (ಆರ್ಯುಬಿ)ಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ. ಸೋಮಣ್ಣ, ರಾಮೋಹಳ್ಳಿ ಗೇಟ್ನಲ್ಲಿ ರಸ್ತೆ ಕೆಳಸೇತುವೆ ನಿರ್ಮಿಸಬೇಕೆಂಬ ಬಹುಕಾಲದ ಬೇಡಿಕೆ ಇದೀಗ ಈಡೇರಿದ್ದು, ಇದರ ಮೂಲಕ ಬೆಂಗಳೂರಿನ ಸುತ್ತಮುತ್ತಲಿನ ಹಲವು ಪ್ರಮುಖ ಪ್ರದೇಶಗಳಿಗೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ ಎಂದು ಹೇಳಿದರು.
ದೇಶಾದ್ಯಂತ ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಎಲ್ಲ ಲೆವೆಲ್ ಕ್ರಾಸಿಂಗ್ಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಭಾರತೀಯ ರೈಲ್ವೆ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ 61 ರೈಲ್ವೆ ನಿಲ್ದಾಣಗಳನ್ನು ಎಸ್ಕಲೇಟರ್, ಲಿಫ್ಟ್, ಪಾದಚಾರಿ ಮೇಲ್ಸೇತುವೆ ಸೇರಿದಂತೆ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರ ಅನುಕೂಲಕ್ಕೆ ತಕ್ಕಂತೆ ವಿವಿಧ ಪ್ರಯಾಣಿಕ ಸ್ನೇಹಿ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ರಸ್ತೆ ಮೇಲ್ಸೇತುವೆ (ಆರ್ಒಬಿ) ಹಾಗೂ ರಸ್ತೆ ಕೆಳಸೇತುವೆ (ಆರ್ಯುಬಿ) ಯೋಜನೆಗಳ ಸಂಪೂರ್ಣ ವೆಚ್ಚವನ್ನು ರೈಲ್ವೆ ಸಚಿವಾಲಯವೇ ಭರಿಸುವ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೆ ಮಾದರಿಯಿಂದ ಹೊರಬಂದಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು ಕ್ಯಾಂಟೋನ್ಮೆಂಟ್ ಹಾಗೂ ಯಶವಂತಪುರ ರೈಲು ನಿಲ್ದಾಣಗಳ ಪುನರ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಗದಗ–ವಾಡಿ, ತುಮಕೂರು–ರಾಯದುರ್ಗ, ಮಾರಿಕುಪ್ಪಂ–ಕುಪ್ಪಂ ಸೇರಿದಂತೆ ಬಹುಕಾಲದಿಂದ ಬಾಕಿ ಉಳಿದಿರುವ ರೈಲು ಮಾರ್ಗ ಯೋಜನೆಗಳಿಗೆ ವೇಗ ನೀಡಲಾಗಿದೆ. ಜೊತೆಗೆ ಬೆಂಗಳೂರು–ಕೋಲಾರ ನೇರ ರೈಲು ಮಾರ್ಗ ಯೋಜನೆಯೂ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
₹8.84 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಕೆಳಸೇತುವೆಯು ರಸ್ತೆ ಬಳಕೆದಾರರು ಹಾಗೂ ರೈಲು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ, ಲೆವೆಲ್ ಕ್ರಾಸಿಂಗ್ನಿಂದ ಉಂಟಾಗುತ್ತಿದ್ದ ವಾಹನ ದಟ್ಟಣೆ ಮತ್ತು ವಿಳಂಬವನ್ನು ನಿವಾರಿಸಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿದೆ.
ಶೋಭಾ ಕರಂದ್ಲಾಜೆ ಮಾತನಾಡಿ, ನಿಗದಿತ ಅವಧಿಗೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು. ಈ ರಸ್ತೆ ಕೆಳಸೇತುವೆಯಿಂದ ಸಾವಿರಾರು ಪ್ರಯಾಣಿಕರಿಗೆ ಸುರಕ್ಷಿತ ಸಂಚಾರ, ಕಡಿಮೆ ಪ್ರಯಾಣ ಸಮಯ ಹಾಗೂ ಉತ್ತಮ ಸಂಪರ್ಕ ವ್ಯವಸ್ಥೆ ದೊರೆಯಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸರಕು ಸಾಗಣೆಯ ವೇಗ ಹೆಚ್ಚಿಸಲು, ಕಾರ್ಯಕ್ಷಮತೆ ಸುಧಾರಿಸಲು ಹಾಗೂ ರೈಲ್ವೆ ಜಾಲದ ಸಾಮರ್ಥ್ಯ ವೃದ್ಧಿಸಲು ವಿಶೇಷ ಸರಕು ಸಾಗಣೆ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿ ಗೌಡ, ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ್ ಕಟಾರಕಿ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಹಾಗೂ ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
