ನವ ದೆಹಲಿ:: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಆವರಣದ ಭದ್ರತಾ ವ್ಯವಸ್ಥೆಯನ್ನು ಅಕ್ಟೋಬರ್ 28ರಂದು ನಡೆದ ತ್ರೈಮಾಸಿಕ ಸಭೆಯಲ್ಲಿ ಪರಿಶೀಲಿಸಲಾಯಿತು. ಆವರಣದ ಯಾತ್ರಿ ಸೌಲಭ್ಯ ಕೇಂದ್ರದ (ಪಿಎಫ್ಸಿ) ಸಭಾಂಗಣದಲ್ಲಿ ಸಭೆ ನಡೆಯಿತು.
ಆವರಣದ ಎಲ್ಲ ಭಾಗಗಳ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಸಭೆಯಲ್ಲಿ, ಸುಧಾರಣೆ ಅಗತ್ಯವಿರುವ ಅಂಶಗಳನ್ನು ಗುರುತಿಸುವುದು ಹಾಗೂ ಜಾಗರೂಕತೆ ಕಾಯ್ದುಕೊಳ್ಳುವುದಕ್ಕೆ ಗಮನ ನೀಡಲಾಯಿತು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಅದರ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗೋವಿಂದದೇವ ಗಿರಿ ಅವರು ಕೋಲ್ಕತ್ತಾದಿಂದ ಆನ್ಲೈನ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಭದ್ರತಾ ಮಹಾನಿರ್ದೇಶಕ ಅಮರೇಂದ್ರ ಕುಮಾರ್ ಸೆಂಗರ್, ಲಖನೌ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಕುಮಾರ್, ಇಂಟೆಲಿಜೆನ್ಸ್ ಬ್ಯೂರೋದ ಹೆಚ್ಚುವರಿ ಮಹಾನಿರ್ದೇಶಕಿ ವಿನೀತಾ ಶರ್ಮಾ ಹಾಗೂ ಸಿಆರ್ಪಿಎಫ್ ಉಪ ಮಹಾನಿರೀಕ್ಷಕ ವಿನಯ್ ನೇಗಿ ಸಭೆಯಲ್ಲಿ ಭಾಗವಹಿಸಿದ್ದರು.
ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಏರ್ ಮಾರ್ಷಲ್ ಜಿತೇಂದ್ರ ಮಿಶ್ರ (ನಿವೃತ್ತ) ಹಾಗೂ ಕಾರ್ಯದರ್ಶಿ ಜಗದೀಶ್ ಆಫಲೆ ಸಹ ಉಪಸ್ಥಿತರಿದ್ದರು. ಭದ್ರತಾ ಪೊಲೀಸ್ ಅಧೀಕ್ಷಕ ವಿಜಯ್ ಶಂಕರ್ ಮಿಶ್ರ ಮತ್ತು ದೇವಾಲಯದ ಭದ್ರತಾ ಉಸ್ತುವಾರಿ ಕೆ.ಕೆ. ತಿವಾರಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಯೋಧ್ಯೆಯ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕರು ಸಹ ಭದ್ರತಾ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
