ಬೆಳಗಾವಿ:
‘ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಈ ವಿಷಯವನ್ನು ಅವರೇ ನನಗೆ ತಿಳಿಸಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುಣಮುಖವಾದ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.
‘ಅವರು ಬೆಂಗಳೂರಿನಲ್ಲೇ ಇದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಹೋದರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇನ್ನೆರಡು ದಿನಗಳಲ್ಲಿ ಪ್ರಚಾರಕ್ಕೆ ಬರುತ್ತಾರೆ. ರಮೇಶ ಹಾಗೂ ಬಾಲಚಂದ್ರ ಜೊತೆ ಪ್ರಚಾರದ ವಿಷಯವನ್ನಷ್ಟೆ ಮೊಬೈಲ್ ಫೋನ್ ಮೂಲಕ ಮಾತನಾಡಿದ್ದೇನೆ’ ಎಂದರು.