Home Uncategorized Raymo Movie Review: ಆಗಾಗ ಟ್ವಿಸ್ಟ್​ ನೀಡುವ ಭಾವನೆಗಳ ಹಾವು-ಏಣಿ ಆಟ

Raymo Movie Review: ಆಗಾಗ ಟ್ವಿಸ್ಟ್​ ನೀಡುವ ಭಾವನೆಗಳ ಹಾವು-ಏಣಿ ಆಟ

0
0
bengaluru

ಸಿನಿಮಾ: ರೇಮೊ

ನಿರ್ಮಾಣ: ಸಿ.ಆರ್​. ಮನೋಹರ್

ನಿರ್ದೇಶನ: ಪವನ್​ ಒಡೆಯರ್​

ಪಾತ್ರವರ್ಗ: ಇಶಾನ್​, ಆಶಿಕಾ ರಂಗನಾಥ್​, ಶರತ್​ ಕುಮಾರ್​, ರಾಜೇಶ್​ ನಟರಂಗ, ಮಧುಬಾಲಾ, ಅಚ್ಯುತ್​ ಕುಮಾರ್​ ಮುಂತಾದವರು.

bengaluru

ಸ್ಟಾರ್​: 3.5/5

ನಿರ್ದೇಶಕ ಪವನ್​ ಒಡೆಯರ್​​ ಸಿನಿಮಾಗಳೆಂದರೆ ಟಿಸ್ಟ್​ಗಳು ಇರಲೇಬೇಕು. ಈಗ ಅವರು ನಿರ್ದೇಶನ ಮಾಡಿರುವ ‘ರೇಮೊ’ ಚಿತ್ರ ಕೂಡ ಅಂತಹ ಹಲವು ಟ್ವಿಸ್ಟ್​ಗಳಿಂದ ತುಂಬಿರುವ ಸಿನಿಮಾ. ಚಂದದ ಒಂದು ಲವ್​ ಸ್ಟೋರಿಯನ್ನು ಅವರು ಹೆಣೆದಿದ್ದಾರೆ. ಎರಡು ತದ್ವಿರುದ್ಧ ಪಾತ್ರಗಳ ನಡುವೆ ಪ್ರೀತಿ ಚಿಗುರುವ ನೂರಾರು ಸಿನಿಮಾಗಳ ರೀತಿಯೇ ಈ ಚಿತ್ರದ ಕಥೆ ಕೂಡ ಇದೆ ಎನಿಸುತ್ತದೆ. ಅದರ ನಡುವೆಯೂ ತಮ್ಮದೇ ಆದಂತಹ ಮೇಕಿಂಗ್​ ಶೈಲಿಯಿಂದಾಗಿ ಈ ಚಿತ್ರವನ್ನು ಪವನ್​ ಒಡೆಯರ್​ ಭಿನ್ನವಾಗಿಸಿದ್ದಾರೆ. ಇಶಾನ್​ ಮತ್ತು ಆಶಿಕಾ ರಂಗನಾಥ್​ ಅವರ ನಟನೆಗೆ ಈ ಸಿನಿಮಾದಲ್ಲಿ ಹೆಚ್ಚಿನ ಸ್ಕೋಪ್​ ಸಿಕ್ಕಿದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬ ವಿಮರ್ಶೆ ಇಲ್ಲಿದೆ..

ಕಥೆಯ ಎಳೆ ಹೀಗಿದೆ..

ಕೋಟ್ಯಾಧೀಶರ ಮನೆಮಗ ರೇವಂತ್​ (ಇಶಾನ್​) ಓರ್ವ ರಾಕ್​ ಸ್ಟಾರ್. ‘ರೇಮೊ’ ಎಂಬ ಹೆಸರಿನಿಂದ ಆತ ಸಿಕ್ಕಾಪಟ್ಟೆ ಫೇಮಸ್​. ಹೆಣ್ಣು, ಹೆಂಡ, ಮಾದಕ ವಸ್ತುಗಳ ದಾಸ ಕೂಡ ಹೌದು. ಅವನಿಗೆ ವಿರುದ್ಧವಾದ ವ್ಯಕ್ತಿತ್ವ ಹೊಂದಿರುವವಳು ಕಥಾನಾಯಕಿ ಮೋಹನಾ (ಆಶಿಕಾ). ಅಪ್ಪಟ ಸಂಪ್ರದಾಯಸ್ಥ ಮನೆತನದ ಆಕೆ ಕೂಡ ಗಾಯಕಿ. ಸಂಗೀತದ ಕಾರಣಕ್ಕಾಗಿ ರೇಮೊ ಮತ್ತು ಮೋಹನಾ ಭೇಟಿ ಆಗುತ್ತಾರೆ. ಆ ಭೇಟಿ ಪ್ರೀತಿಗೆ ತಿರುಗುತ್ತದೆ. ನಂತರ ದ್ವೇಷ ಹುಟ್ಟುತ್ತದೆ. ಅದಕ್ಕೆಲ್ಲ ಕಾರಣ ಏನು? ಅಂತಿಮವಾಗಿ ಗೆಲ್ಲೋದು ಯಾರು? ಈ ಪ್ರಶ್ನೆಗೆ ಉತ್ತರ ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಡಬಲ್​ ಶೇಡ್​ ಪಾತ್ರದಲ್ಲಿ ಇಶಾನ್​, ಆಶಿಕಾ:

ಈ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಯ ಪಾತ್ರಗಳಿಗೆ ನಿರ್ದೇಶಕ ಪವನ್​ ಒಡೆಯರ್​ ಅವರು ಸಮಾನ ಪ್ರಾಮುಖ್ಯತೆ ನೀಡಿದ್ದಾರೆ. ಕೇವಲ ಹೀರೋ ಜೊತೆ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವ ಪಾತ್ರ ನಾಯಕಿಯದ್ದಲ್ಲ. ಇಶಾನ್​ ಮತ್ತು ಆಶಿಕಾ ರಂಗನಾಥ್​ ಅವರಿಗೆ ಎರಡು ಶೇಡ್​ ಇರುವಂತಹ ಪಾತ್ರವಿದೆ. ಆ ಪಾತ್ರಗಳನ್ನು ಅವರಿಬ್ಬರು ಚೆನ್ನಾಗಿ ನಿಭಾಯಿಸಿದ್ದಾರೆ. ಆರಂಭದಲ್ಲಿ ಅಬ್ಬರಿಸುವ ಇಶಾನ್​ ಅವರು ನಂತರದಲ್ಲಿ ಸೂಕ್ಷ್ಮ ನಟನೆಯಿಂದ ಸೆಳೆಯುತ್ತಾರೆ. ಶುರುವಿನಲ್ಲಿ ಸೈಲೆಂಟ್​ ಹುಡುಗಿಯಂತೆ ಕಾಣುವ ಆಶಿಕಾ, ನಂತರದಲ್ಲಿ ವೈಲೆಂಟ್​ ಆಗಿ ಅಬ್ಬರಿಸುತ್ತಾರೆ.

ಭಾವನೆಗಳೇ ಈ ಚಿತ್ರದ ಜೀವಾಳ:

ಒಟ್ಟಾರೆಯಾಗಿ ‘ರೇಮೊ’ ಸಿನಿಮಾ ಭಾವನೆಗಳ ಹಾವು-ಏಣಿ ಆಟದಂತಿದೆ. ರೋಷಾವೇಷದಲ್ಲಿ ಅಬ್ಬರಿಸುತ್ತ ಮೇಲೇರುವ ಪಾತ್ರಗಳು ಯಾವುದೋ ಹಂತದಲ್ಲಿ ಆಘಾತಕ್ಕೆ ಒಳಗಾಗಿ ನೆಲಕಚ್ಚುತ್ತವೆ. ಸೈಲೆಂಟ್​ ಆಗಿ ಕೆಳಗೆ ಇದ್ದ ಪಾತ್ರಗಳು ಒಮ್ಮೆಲೇ ಏಣಿ ಹಿಡಿದು ಮೇಲೇರುತ್ತವೆ. ಪ್ರತಿ ಬಾರಿ ಟ್ವಿಸ್ಟ್​ ಎದುರಾದಾಗಲೂ ಪ್ರೇಕ್ಷಕರಿಗೆ ಈ ಹಾವು-ಏಣಿ ಆಟವೇ ಮನರಂಜನೆ ನೀಡುತ್ತದೆ.

ಅದ್ದೂರಿತನಕ್ಕೆ ಕೊರತೆ ಇಲ್ಲ:

ತುಂಬ ಅದ್ದೂರಿಯಾಗಿ ಈ ಚಿತ್ರವನ್ನು ಚಿತ್ರಿಸಲಾಗಿದೆ. ದುಬಾರಿ ಸೆಟ್​ಗಳು, ವಿದೇಶಿ ಲೊಕೇಷನ್​ಗಳು, ಅದ್ದೂರಿ ಸಾಹಸ ದೃಶ್ಯಗಳಿಂದಾಗಿ ಈ ಚಿತ್ರ ಶ್ರೀಮಂತವಾಗಿದೆ. ಹಾಗಂತ ಬರೀ ಅದರಲ್ಲೇ ಮುಳುಗಿ ಹೋಗಿಲ್ಲ. ಎಲ್ಲವನ್ನೂ ಕಥೆಯ ಅವಶ್ಯಕತೆಗೆ ಬೇಕಾಗುವಷ್ಟೇ ಹಿತ-ಮಿತವಾಗಿ ಬಳಸಲಾಗಿದೆ.

ಸಿಂಗರ್​ ಬದುಕಿನ ಏರಿಳಿತಗಳನ್ನು ತೋರಿಸಲು ಹಾಡುಗಳು ಬಳಕೆ ಆಗಿವೆ. ಇಡೀ ಸಿನಿಮಾದ ಕಥೆಯಲ್ಲಿ ಸಂಗೀತಕ್ಕೆ ಹೆಚ್ಚು ಸ್ಪೇಸ್​ ಇದೆ. ಆದ್ದರಿಂದ ಚಿತ್ರದ ಹಾಡುಗಳ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಿದ್ದರೆ ಚೆನ್ನಾಗಿರುತ್ತಿತ್ತು. ದ್ವಿತೀಯಾರ್ಧ ಕೊಂಚ ಎಳೆದಾಡಿದಂತಾಗಿದೆ. ಒಂಚೂರು ಟ್ರಿಮ್​ ಮಾಡಿದ್ದರೆ ‘ರೇಮೊ’ ಇನ್ನಷ್ಟು ಆಪ್ತವಾಗುತ್ತಿತ್ತು.

ಭರವಸೆ ಮೂಡಿಸಿದ ಇಶಾನ್​:

ನಟ ಇಶಾನ್​ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಟನೆಯಲ್ಲೂ, ಫೈಟಿಂಗ್​ನಲ್ಲೂ ಅವರು ಭರವಸೆ ಮೂಡಿಸಿದ್ದಾರೆ. ಶರತ್​ ಕುಮಾರ್​ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ತೂಕದ ಅಭಿನಯ ನೀಡಿದ್ದಾರೆ. ಮಧುಬಾಲಾ, ರಾಜೇಶ್​ ನಟರಂಗ, ಅಚ್ಯುತ್​ ಕುಮಾರ್​ ಅವರು ಎಂದಿನಂತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

bengaluru

LEAVE A REPLY

Please enter your comment!
Please enter your name here