ಚಿಕ್ಕಮಗಳೂರು:
ನವೆಂಬರ್ 26 ರಂದು ಶ್ರೀರಾಮಸೇನೆ ವತಿಯಿಂದ ನಡೆಯಲಿರುವ ದತ್ತಮಾಲೆ ಕಾರ್ಯಕ್ರಮ ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಶ್ರೀರಾಮ ಸೇನೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ಶ್ರೀ ರಾಮ ಸೇನೆ ಕಾರ್ಯಕರ್ತರು ಆಗಮಿಸುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಈ ಬಾರಿ ಕನಿಷ್ಠ 100 ಜನ ಸೇರಲು ಅವಕಾಶವಿದ್ದು, ದತ್ತಮಾಲೆಯಲ್ಲಿ ಭಾಗವಹಿಸುವ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ತಿಳಿಸಿದ ಅವರು ಮೆರವಣಿಗೆ, ಶೋಭಾಯಾತ್ರೆಗೆ ಅವಕಾಶ ಇರುವುದಿಲ್ಲ. ಬೆಟ್ಟಕ್ಕೆ ದೊಡ್ಡ ಚಾರ್ಸಿಯ ಬಸ್ ಗಳಲ್ಲಿ ತೆರಳಲು ಅವಕಾಶವಿರುವುದಿಲ್ಲ. ಲಘು ವಾಹನಗಳಲ್ಲಿ ಸಾಮಾಜಿ ಅಂತರ ಕಾಯ್ದುಕೊಂಡು ತೆರಳುವಂತೆ ಹೇಳಿದರು.
ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿ ಕೊರೋನಾ ಹಿನ್ನೆಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಪದಾಧಿಕಾರಿಗಳು ಬರದಂತೆ ಸೂಚನೆ ನೀಡಲಾಗಿದ್ದು, ಆಯಾ ಜಿಲ್ಲೆಗಳಲ್ಲಿ ಅಂದು ದತ್ತಮಾಲೆ ಧರಿಸಿ ಆಯಾ ಜಿಲ್ಲೆಗಳಲ್ಲಿಯೇ ವಿಸರ್ಜಿಸುವಂತೆ ತಿಳಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ಜಿಲ್ಲಾಡಳಿತದ ನಿರ್ಣಯದಂತೆ ಈ ಬಾರಿ ಶೋಭಾಯಾತ್ರೆ ಮಾಡಲಾಗುವುದಿಲ್ಲ, ಜಿಲ್ಲೆಯಲ್ಲಿ 100 ಜನ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ, ಯಾವ ವಾಹನಗಳಲ್ಲಿ ಬೆಟ್ಟಕ್ಕೆ ತೆರಳುವ ಬಗ್ಗೆ ಅನುಮತಿ ಪಡೆಯಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಬ್ಯಾನರ್, ಫ್ಲೆಕ್ಸ್ ಹಾಕಲು ಅವಕಾಶವಿರುವುದಿಲ್ಲ. ನಗರಸಭೆ ಆಯುಕ್ತರು ಸೂಚಿಸಿದ 5 ಕಡೆ ಬ್ಯಾನರ್ ಕಟ್ಟಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ದಿನವಾದ ನವೆಂಬರ್ 26 ರಂದು ಬಾಬಾ ಬುಡನ್ ಗಿರಿಗೆ ಪ್ರವಾಸಿಗರು ಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದ್ದು, ಪ್ರವಾಸಿಗರು ಅಂದು ಬಾಬಾ ಬುಡನ್‌ಗಿರಿಗೆ ಆಗಮಿಸದಂತೆ ಮನವಿ ಮಾಡಿದ ಜಿಲ್ಲಾಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಶ್ರೀರಾಮ ಸೇನೆ ಕಾರ್ಯಕರ್ತರಿಗೆ ತಿಳಿಸಿದರು.
ಬೆಟ್ಟದಲ್ಲಿ ನವೆಂಬರ್ 26 ರಂದು ತಾತ್ಕಾಲಿಕ ಆಸ್ಪತ್ರೆ ತೆರೆದು ಅಗತ್ಯ ಔಷಧಿ ಹಾಗೂ ಅಂಬುಲೇನ್ಸ್‌ಗಳೊಂದಿಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ತಾತ್ಕಾಲಿಕ ಆಸ್ಪತ್ರೆಯ ಆವರಣಕ್ಕೆ ಸುಣ್ಣ-ಬಣ್ಣ ಬಳಿಯುವುದು ಅವಶ್ಯವಿರುವ ಕಡೆ ಬ್ಯಾರಿಕೇಡ್ ಗಳನ್ನು ಹಾಕುವುದಲ್ಲದೆ ಸಿ.ಸಿ.ಟಿವಿ ದುರಸ್ತಿಯಲ್ಲಿದ್ದರೇ ದುರಸ್ತಿಗೊಳಿಸಿ ಅವಶ್ಯವಿರುವ ಕಾಮಗಾರಿ ನಿರ್ವಹಣೆ ಮಾಡುವಂತೆ ನಿರ್ಮಿತಿ ಕೇಂದ್ರಕ್ಕೆ, ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ, ಗಾಳಿಕೆರೆ ಹಾಗೂ ಮಾಣಿಕ್ಯಧಾರಕ್ಕೆ ತೆರಳುವ ರಸ್ತೆ ದುರಸ್ಥಿಪಡಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳಿಗೆ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ನಗರಸಭೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.