ಚಿಕ್ಕಮಗಳೂರು: ಇಲ್ಲಿನ ಅರಣ್ಯ ವ್ಯಾಪ್ತಿಯಲ್ಲಿನ ಚನ್ನಗೋಡನಹಳ್ಳಿ ಅರಣ್ಯದಲ್ಲಿ ಬೆಂಕಿ (Forest Fires) ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ, ಪಶ್ಚಿಮಘಟ್ಟ ಸಾಲಿನಲ್ಲಿರುವ ಮುಳ್ಳಯ್ಯನಗಿರಿಗೆ ಹೊಂದಿಕೊಂಡಿರುವ ಚೆನ್ನಗೊಂಡನಹಳ್ಳಿ ಪ್ರದೇಶದಲ್ಲಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಬೆಂಕಿಯ ಕೆನ್ನಾಲಿಗೆ ಈಗಾಗಲೇ ಸಾಕಷ್ಟು ಅರಣ್ಯ ಪ್ರದೇಶವನ್ನು ವ್ಯಾಪಿಸಿದೆ. ಬಿಸಿಲ ಧಗೆ ಮತ್ತು ಗಾಳಿಯಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಕ್ಲಿಷ್ಟಕರ ಪ್ರದೇಶದಲ್ಲಿ ಬೆಂಕಿ ಆವರಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರೂ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಅಮೂಲ್ಯ ಔಷಧಗುಣವುಳ್ಳ ಸಸ್ಯ ಸಂಪತ್ತು, ಮರಗಿಡಗಳು ಈಗಾಗಲೇ ಬೆಂಕಿಗೆ ಆಹುತಿಯಾಗಿವೆ ತಿಳಿದು ಬಂಧಿದೆ.
ಪ್ರವಾಸಿಗರು ಮಾಡಿದ ಕಿಡಿಗೇಡಿತನದಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ ಎನ್ನಲಾಗುತ್ತಿದ್ದು, ಕಾಡಾನೆಗಳ ಹಿಂಡು ಜಿಲ್ಲೆಯಲ್ಲಿ ಬೀಡು ಬಿಟ್ಟಿವೆ. ಚಿಕ್ಕೊಳಲೆಯಲ್ಲಿ ಬೀಡು ಬಿಟ್ಟಿರುವ ಆನೆಗಳು ಸ್ಥಳದಿಂದ ಕದಲುತ್ತಿಲ್ಲ. ಬೆಂಕಿಯ ಕೆನ್ನಾಲಿಗೆ ರಸ್ತೆ ಬದಿಯಲ್ಲೂ ವ್ಯಾಪಿಸಿರುವುದರಿಂದ ಪ್ರವಾಸಿಗರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಪ್ರವಾಸಿಗರು ಮಾಡಿರುವ ಕೀಡಿಗೇಡಿತನದಿಂದ ಪಶ್ಚಿಮ ಘಟ್ಟ ಪ್ರದೇಶದ ಮುಳ್ಳಯ್ಯನಗಿರಿ ಸಮೀಪದ ಚೆನ್ನಗೊಂಡನಹಳ್ಳಿ ಪ್ರದೇಶದಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ದುರ್ಗಮ ಪ್ರದೇಶವಾಗಿರುವು ದರಿಂದ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ. ಗಾಳಿ ಮತ್ತು ಒಣಗಿದ ಮರಗಳ ಎಲೆಗಳಿಂದ ಬೆಂಕಿ ಸಾಕಷ್ಟು ವ್ಯಾಪಿಸುತ್ತಿದೆ. ಒಂದು ಕಡೆ ಕಾಡಾನೆಗಳ ನಿಯಂತ್ರಣ ಅವುಗಳ ಚಲನ ವಲನ ನಿಗಾ ಇಡಬೇಕು. ಮತ್ತೊಂದು ಕಡೆ ಯಾರೋ ಮಾಡಿರುವ ಕಿಡಿಗೇಡಿ ಕೃತ್ಯದಿಂದ ಬೆಂಕಿ ಹತ್ತಿದ್ದು, ಬೆಂಕಿ ನಂದಿಸು ಕಾರ್ಯವನ್ನು ಮಾಡಬೇಕಿದೆ. ಇದರಿಂದ ಹೈರಾಣಾಗಿ ಹೋಗಿದ್ದೇವೆಂದು ತಮ್ಮ ಅರಣ್ಯ ಇಲಾಖೆ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.