ಬೆಂಗಳೂರು ಗ್ರಾಮಾಂತರ ಜಿಲ್ಲೆ:
ವಿದ್ಯಾರ್ಥಿನಿಯರು, ಅಪ್ರಾಪ್ತೆಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ದೌರ್ಜನ್ಯಗಳ ತಡೆಗೆ ಆತ್ಮ ರಕ್ಷಣೆ ಕಲೆ ಸಹಕಾರಿಯಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಬೊಮ್ಮವಾರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಆವರಣದಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ “ಓಬವ್ವ ಸ್ವಯಂ ಆತ್ಮ ರಕ್ಷಣೆ ಕಲೆ, ಕೌಶಲ್ಯಗಳ ತರಬೇತಿ” ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.

ಕೆಲವು ಕಿಡಿಗೇಡಿಗಳಿಂದಾಗಿ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಗಂಡು-ಹೆಣ್ಣು ಎಂಬ ಬೇಧ-ಭಾವವಿಲ್ಲದೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರ್ಕಾರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ, ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗೆ ವಿನೂತನವಾಗಿ ಜಾರಿಗೊಳಿಸಿರುವ “ಓಬವ್ವ ಸ್ವಯಂ ಆತ್ಮ ರಕ್ಷಣೆ ಕಲೆ, ಕೌಶಲ್ಯಗಳ ತರಬೇತಿ” ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಧೈರ್ಯವನ್ನು ಬೆಳೆಸಿಕೊಳ್ಳಲು ಇಂತಹ ಕೌಶಲ್ಯ ತರಬೇತಿಗಳು ನೆರವಾಗಲಿದ್ದು, ಯೋಗ, ವ್ಯಾಯಾಮ ,ಕರಾಟೆಯನ್ನು ಪ್ರತಿದಿನದ ಜೀವನದಲ್ಲಿ ರೂಢಿಸಿಕೊಂಡು ಅಭ್ಯಾಸ ಮಾಡುವುದರಿಂದ ಆತ್ಮಸ್ಥೈರ್ಯದೊಂದಿಗೆ ಸವಾಲುಗಳನ್ನು ಎದುರಿಸಿ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್ ಅವರು ಮಾತನಾಡಿ, ವಿದ್ಯಾರ್ಥಿನಿಯರು ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರಲ್ಲದೆ, ಸಮಸ್ಯೆಗಳು ಎದುರಾದಾಗ, ಕುಗ್ಗದೆ, ಶಾಂತಚಿತ್ತ ಮನೋಭಾವ ಹಾಗೂ ಆತ್ಮಸ್ಥೈರ್ಯದಿಂದ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೊಮ್ಮವಾರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಆವರಣದಲ್ಲಿ “ಓಬವ್ವ ಸ್ವಯಂ ಆತ್ಮ ರಕ್ಷಣೆ ಕಲೆ, ಕೌಶಲ್ಯಗಳ ತರಬೇತಿ” ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಉದ್ಘಾಟಿಸಿದರು. pic.twitter.com/1eZ3OWcGjN
— Deputy Commissioner Bengaluru Rural (@DC_Bng_Rural) February 8, 2022
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ಕೋನ ವಂಶಿಕೃಷ್ಣ ಅವರು ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯಗಳು, ಕಿರುಕುಳಗಳು ನಡೆಯುತ್ತಿದ್ದು, ಇವುಗಳನ್ನು ತಡೆಯುವಲ್ಲಿ ಮತ್ತು ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಓಬವ್ವ ಕೌಶಲ್ಯ ರಕ್ಷಣಾ ತರಬೇತಿಯು ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸ್ವಯಂ ಆತ್ಮ ರಕ್ಷಣೆ ಕಲೆಯನ್ನು ಪ್ರಸ್ತುತಪಡಿಸಿದರು.
ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಗಳ ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ವಿನಯ್‌ಕುಮಾರ್.ಎಸ್.ಎಂ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಕೃಷ್ಣಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಭವ್ಯ ಕೆ.ಆರ್. ಸೇರಿದಂತೆ ವಿಶ್ವನಾಥಪುರ ಹಾಗೂ ಬೊಮ್ಮವಾರ ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಂಬಂಧಿಸಿದ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.