ಬೆಂಗಳೂರಿನ ಬಿಐಇಸಿಯಲ್ಲಿ ನಡೆದ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ವೇದಿಕೆಯ ಮೇಲೆ ದಾಖಲೆಯೊಂದನ್ನು ಸ್ವೀಕರಿಸುತ್ತಿರುವ ಭಾಗವಹಿಸಿದವರು. ಚಿತ್ರ: ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ
ಬೆಂಗಳೂರು: ಬಾಹ್ಯಾಕಾಶ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದು ಬಂದಿರುವ ಹಾದಿ ಹಾಗೂ ಈ ವಲಯಗಳಿಗೆ ಸರ್ಕಾರ ನೀಡುತ್ತಿರುವ ಉತ್ತೇಜನ, ಪ್ರೋತ್ಸಾಹಗಳ ಕುರಿತು ವಿವರ ನೀಡುವ ಮೂಲಕ ರಾಜ್ಯ ಸರ್ಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನಾ ಸಂಸ್ಥೆ (ಕೆಎಸ್‌ಟಿಇಪಿಎಸ್) ಪ್ರದರ್ಶನ ಮಳಿಗೆ ಬೆಂಗಳೂರು ಟೆಕ್ ಸಮಿಟ್‌ನ ಟೆಕ್ ಮೇಳದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ಗಮನ ಸೆಳೆದಿದೆ.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮತ್ತು ಪ್ರಾಯೋಗಿಕವಾಗಿ ವೈಜ್ಞಾನಿಕ ಸಿದ್ಧಾಂತಗಳನ್ನು ಅರಿಯಲು ರಾಜ್ಯದ ವಿವಿಧ ಪ್ರೌಢಶಾಲೆಗಳಲ್ಲಿ 31 ಕಿರಿಯ ವೈಜ್ಞಾನಿಕ ಸಂಪನ್ಮೂಲ ಕೇಂದ್ರಗಳನ್ನು ಸಂಸ್ಥೆಯ ವತಿಯಿಂದ ಸ್ಥಾಪಿಸಲಾಗಿದೆ.
ಪ್ರತಿ ಕೇಂದ್ರದಲ್ಲೂ ವೈಜ್ಞಾನಿಕ ಪರಿಕರಗಳೊಂದಿಗೆ ಪ್ರಯೋಗಾಲಯ ನಿರ್ಮಿಸಲಾಗಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಪಠ್ಯಕ್ರಮ ಆಧಾರಿತ ಪ್ರಯೋಗಗಳನ್ನು ನಡೆಸಲಾಗುತ್ತದೆ. ಕಿಟ್‌ಗಳ ಬಳಕೆಯ ಮೂಲಕ ವಿದ್ಯಾರ್ಥಿಗಳು ಸ್ವತಃ ಪ್ರಯೋಗ ನಡೆಸುವುದರಿಂದ ವಿಜ್ಞಾನದ ಮೂಲಭೂತ ತತ್ವಗಳನ್ನು ತಿಳಿಯಲು ಸಹಾಯವಾಗುತ್ತದೆ.
ಮಳಿಗೆಗೆ ಭೇಟಿ ನೀಡಿದ ಪದವಿ ವಿದ್ಯಾರ್ಥಿ ಶ್ರುತಿ ಶೇಠ್, “ಶಾಲೆಗಳಲ್ಲಿ ಇಂತಹ ಮಿನಿ ವೈಜ್ಞಾನಿಕ ಕೇಂದ್ರಗಳ ಸ್ಥಾಪನೆ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಲು ನೆರವಾಗುತ್ತದೆ” ಎಂದರು.
ಇದಲ್ಲದೆ ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿ ವೈಜ್ಞಾನಿಕ ಸಂಸ್ಕೃತಿ ಬೆಳೆಸುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಳಿಗೆಯಲ್ಲಿ ವಿವರ ನೀಡಲಾಗಿದೆ. ವೈಜ್ಞಾನಿಕ ಸಂಶೋಧನಾ ಸಾಮರ್ಥ್ಯ ನಿರ್ಮಾಣಕ್ಕಾಗಿ ‘ಮೆಂಟರ್‌ಶಿಪ್ ಇನಿಷಿಯೇಟಿವ್’ ಹಾಗೂ ಅಂತರ-ಶಿಸ್ತೀಯ ಮತ್ತು ಅಂತರ-ಪೀಳಿಗೆ ಸಾರ್ವಜನಿಕ ಪ್ರಯೋಗಾಲಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಚಂದ್ರಯಾನ ಯೋಜನೆ ಸೇರಿದಂತೆ ವಿವಿಧ ಬಾಹ್ಯಾಕಾಶ ಯೋಜನೆಗಳಲ್ಲಿ ಇಸ್ರೋ ಸಂಸ್ಥೆ ಹಾಗೂ ಕರ್ನಾಟಕದ ವಿಜ್ಞಾನಿಗಳ ಕೊಡುಗೆಯ ಬಗ್ಗೆಯೂ ವಿವರಗಳಿವೆ. ಒಟ್ಟಾರೆ ಯುವಜನರಲ್ಲಿ ವಿಜ್ಞಾನದ ಕುತೂಹಲ ತಣಿಸುವ ಪ್ರದರ್ಶನ ಕೇಂದ್ರ ಇದಾಗಿದೆ.
ಸಮಿಟ್‌ನಲ್ಲಿ ಎಸ್‌ಟಿಪಿಐ ನಿರ್ದೇಶಕ ರಾಕೇಶ್ ದುಬೆ, ಕ್ಲೌಡ್ ಕಂಪ್ಯೂಟಿಂಗ್‌ನಿಂದ 2ನೇ, 3ನೇ ಹಂತದ ನಗರಗಳಲ್ಲೂ ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ ಎಂದಿದ್ದಾರೆ.
