Home ಮಂಗಳೂರು ಶಿರಾಡಿ ಘಾಟ್‍ ಅನ್ನು ನಾಲ್ಕು ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಆದ್ಯತೆ: ನಿತಿನ್ ಗಡ್ಕರಿ

ಶಿರಾಡಿ ಘಾಟ್‍ ಅನ್ನು ನಾಲ್ಕು ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಆದ್ಯತೆ: ನಿತಿನ್ ಗಡ್ಕರಿ

18
0
Shiradi Ghat to be converted into a four lane highway Nitin Gadkari
bengaluru

ಮಂಗಳೂರು:

ಮಂಗಳೂರು-ಬೆಂಗಳೂರು ಸಂಪರ್ಕಿಸುವ 26 ಕಿ.ಮೀ. ಉದ್ದದ ಶಿರಾಡಿ ಘಾಟ್‍ ಅನ್ನು ನಾಲ್ಕು ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.

ಅವರು ಫೆ.28ರ ಸೋಮವಾರ ನಗರದ ಕುಲಶೇಖರದಲ್ಲಿ ಕೇಂದ್ರ ರಸ್ತೆ-ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ಮತ್ತು ಲೋಕೋಪಯೋಗಿ ಇಲಾಖೆಯಿಂದ 3,163.47 ಕೋಟಿ ರು. ವೆಚ್ಚದ 164.22 ಕಿ.ಮೀ. ದೂರದ 15 ವಿವಿಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.

ಸುಮಾರು 14 ಸಾವಿರ ಕೋಟಿ ರು. ವೆಚ್ಚದಲ್ಲಿ ಶಿರಾಡಿ ಘಾಟ್ ನಾಲ್ಕು ಪಥದ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಪರಿಸರ ಹಾಗೂ ಅರಣ್ಯ
ಇಲಾಖೆಯಿಂದ ಅನುಮತಿ ದೊರಕಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.

bengaluru

ಶಿರಾಡಿ ಘಾಟ್‍ನಲ್ಲಿ ಸುರಂಗ ಮಾರ್ಗ ರಚನೆಗೂ ಉದ್ದೇಶಿಸಲಾಗಿದ್ದು, ಇದು 7 ಸುರಂಗ ಹಾಗೂ 6 ಸೇತುವೆಯನ್ನು ಒಳಗೊಳ್ಳಲಿದೆ. ಇಲ್ಲಿ ಕೂಡ ಅರಣ್ಯ
ಮತ್ತು ಪರಿಸರ ಇಲಾಖೆಯ ಅನುಮತಿ ಸಿಕ್ಕಿದರೆ ಕಾರ್ಯಸಾಧ್ಯತಾ ವರದಿ ತಯಾರಿಗೆ ಸೂಚನೆ ನೀಡಲಾಗುವುದು. ಈ ಕಾಮಗಾರಿಗಳು ಪೂರ್ಣಗೊಂಡರೆ
ಚೆನ್ನೈ-ಮಂಗಳೂರು ಬಂದರು ಸಂಪರ್ಕ ಸುಲಭವಾಗಲಿದ್ದು, ಇದು ಕರಾವಳಿ ಭಾಗದ ಜೀವನಾಡಿಯಾಗಲಿದೆ ಎಂದು ಹೇಳಿದರು.

ವರ್ತುಲ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸಿಮೆಂಟ್ ಮತ್ತು ಕಬ್ಬಿಣ ಮೇಲಿನ ಜಿಎಸ್‍ಟಿ ಕಡಿತಗೊಳಿಸುವಂತೆ ಜಿಎಸ್‍ಟಿ ಮಂಡಳಿಯನ್ನು ಕೋರಲಾಗಿದೆ. ಇದರಲ್ಲಿ
ವಿನಾಯ್ತಿ ಸಿಕ್ಕಿದರೆ ರಿಂಗ್ ರಸ್ತೆ ನಿರ್ಮಾಣ ಸುಲಭವಾಗಲಿದೆ ಎಂದರು.

ಭೂಸ್ವಾಧೀನಕ್ಕೆ ಜಿಎಸ್‍ಟಿ ಇಳಿಕೆ: ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಬೈಪಾಸ್ ರಸ್ತೆ ರಚನೆಗೆ ಭೂಸ್ವಾಧೀನ ವೇಳೆ ಇಲ್ಲಿವರೆಗೆ ಶೇ.50ರಷ್ಟು ಜಿಎಸ್‍ಟಿ ಪಾವತಿಸಬೇಕಾಗುತ್ತಿತ್ತು. ಇನ್ನು ಮುಂದೆ ಇದನ್ನು ಶೇ.25ಕ್ಕೆ ಇಳಿಕೆ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದೆ. ಇದರಿಂದಾಗಿ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಬೈಪಾಸ್ ರಸ್ತೆಗಳು ಪೂರ್ಣಗೊಳ್ಳಲಿವೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈಗ ದೇಶದಲ್ಲಿ ಪ್ರತಿದಿನ 38 ಕಿ.ಮೀ. ರಸ್ತೆ ನಿರ್ಮಾಣವಾಗುತ್ತಿದೆ. ಭಾರತ್‍ಮಾಲಾ
ಪರಿಯೋಜನಾ, 19,462 ಕಿ.ಮೀ. ಹೆದ್ದಾರಿ ರಚನೆಗೆ ಚಾಲನೆ ನೀಡಲಾಗಿದೆ. ಕಳೆದ 7 ವರ್ಷದಲ್ಲಿ ರಾಜ್ಯದಲ್ಲಿ 42 ಸಾವಿರ ಕಿ.ಮೀ. ಹೆದ್ದಾರಿ ಪೂರ್ಣಗೊಂಡಿದ್ದು, 121
ಯೋಜನೆಗಳಿಗೆ 42,862 ಕೋಟಿ ರು. ವಿನಿಯೋಗಿಸಲಾಗಿದೆ. ಗತಿ ಶಕ್ತಿ ಮೂಲಕ ದೇಶದಲ್ಲಿ 2 ಲಕ್ಷ ಕೋಟಿ ರು.ಗಳ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸಂಸದರಾದ ನಳಿನ್ ಕುಮಾರ್ ಕಟೀಲ್, ನಂತೂರಿಗೆ ಮೇಲ್ಸೇತುವೆ, ಮಾಣಿ-ಮೈಸೂರು ನಾಲ್ಕು ಪಥ ಹಾಗೂ ಸುರತ್ಕಲ್ ಟೋಲ್‍ನ್ನು ಹೆಜಮಾಡಿ ಟೋಲ್ ಪ್ಲಾಝಾ ಜತೆ ವಿಲೀನಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಈ ಬೇಡಿಕೆಗೆ ಸಚಿವ ನಿತಿನ್ ಗಡ್ಕರಿ ಸ್ಥಳದಲ್ಲೇ ಒಪ್ಪಿಗೆ ಸೂಚಿಸಿದರು.

ಹೆದ್ದಾರಿಗಳ ಅಭಿವೃದ್ಧಿ ಜತೆಗೆ ಮೇಲ್ಸೇತುವೆ ರಚನೆಗೆ ಸಮ್ಮತಿ ಸೂಚಿಸಿದ ಸಚಿವರು, ಸುರತ್ಕಲ್ ಎನ್‍ಐಟಿಕೆ ಟೋಲ್‍ನ್ನು ತಾಂತ್ರಿಕ ಕಾರಣಕ್ಕೆ ವಿಲೀನಗೊಳಿಸಲು
ವಿಳಂಬವಾಗಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಶಿವಮೊಗ್ಗ ಸಂಸದ
ಬಿ.ವೈ.ರಾಘವೇಂದ್ರ, ಕೋಲಾರ ಸಂಸದ ಮುನಿಸ್ವಾಮಿ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ರಾಜೇಶ್
ನಾೈಕ್, ಸಂಜೀವ ಮಠಂದೂರು, ಕಾರವಾರ ಶಾಸಕಿ ರೂಪಾಲಿ ಸಂತೋಷ್ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಇತರೆ ಗಣ್ಯರು, ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.

bengaluru

LEAVE A REPLY

Please enter your comment!
Please enter your name here