Home ಬೆಂಗಳೂರು ನಗರ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ | ವೇಮನರು ಅಪರೂಪದ ಸಮಾಜ ಸುಧಾರಕ: ಸಚಿವ‌ ಶಿವರಾಜ್...

ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ | ವೇಮನರು ಅಪರೂಪದ ಸಮಾಜ ಸುಧಾರಕ: ಸಚಿವ‌ ಶಿವರಾಜ್ ತಂಗಡಗಿ

27
0

ಬೆಂಗಳೂರು: ಜ.19 (ಕರ್ನಾಟಕ ವಾರ್ತೆ): ವೇಮನರು ಕವಿಯ ಜೊತೆಗೆ ಅಪರೂಪದ ಸಮಾಜ ಸುಧಾರಕ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್ ತಂಗಡಗಿ ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರ ಸಾಮಾನ್ಯರ ಕವಿಯಾಗಿದ್ದು ತಮ್ಮ ಜೀವಿತದ ಅವಧಿಯಲ್ಲಿ ಜಾತೀಯತೆ, ಅಂಧಶ್ರದ್ದೆ, ಮೇಲುಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದ ಅಪರೂಪದ ಸಮಾಜ ಸುಧಾರಕ. ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್ ಅವರಂತೆ ತೆಲುಗಿನಲ್ಲಿ ಶ್ರೇಷ್ಠ ಮತ್ತು ಮಹಾಕವಿ ಎಂದರೆ ವೇಮನ ಮಹಾಯೋಗಿ ಎಂದು ತಿಳಿಸಿದರು.

ವೇಮನ ಮತ್ತು ಅವರ ಪದ್ಯಗಳ ಕುರಿತು ಮೊಟ್ಟಮೊದಲ ಬಾರಿಗೆ ಬೆಳಕು ಚೆಲ್ಲಿದ್ದು ಸಿ.ಪಿ.ಬ್ರೌನ್. ವೇಮನರನ್ನು ಜಗತ್ತಿಗೆ ಪರಿಚಯಿಸಿದರು. ಅವರು ವೇಮನ ಪದ್ಯಗಳನ್ನು ತೆಲುಗಿನಿಂದ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ. ವೇಮನರ ಪದ್ಯಗಳು ಭಾರತದಷ್ಟೆ ಅಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ಜನಪ್ರಿಯವಾಗಿದೆ ಎಂದು ತಿಳಿಸಿದರು.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಜನಿಸಿದರು. ರಾಜಕುಮಾರನ ಮಗನಾಗಿದ್ದರೂ ವೇಮನರು ತಮ್ಮ ಜೀವಿತ ಅವಧಿಯಲ್ಲಿ ಸುಖಸಂಪತ್ತನ್ನು ತ್ಯಜಿಸಿ ಸಮಾಜ ಸೇವೆಗೆ ಧಾವಿಸಿದ ಮಹಾಪುರುಷರು.

ವೇಮನರು ತಮ್ಮ ಕಣ್ಣಿಗೆ ಕಂಡದ್ದನ್ನೆಲ್ಲಾ ಪದ್ಯಗಳನ್ನಾಗಿ ರಚಿಸಿ ಹಾಡುತ್ತಾ ಸಾಗಿ ಮಹಾ ದಾರ್ಶನಿಕರಾದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ಕಂಡು ಮರುಗುತ್ತಾ, ಅಲ್ಲಲ್ಲೇ ಮೊನಚು ಮಾತುಗಳಿಂದ ಅವುಗಳನ್ನು ತಿದ್ದುತ್ತಾ ತಮ್ಮ ಸಂದೇಶಗಳನ್ನು ಹೇಳುತ್ತಾ ನಿಂತಲ್ಲಿ ನಿಲ್ಲದೇ, ಪರ್ಯಾಟನೆ ಮಾಡುತ್ತಿದ್ದರು. ಇನ್ನು ತಮ್ಮ ಗುರುಗಳ ನೆನಪಿಗಾಗಿ ವಿಶ್ವದಾಭಿರಾಮ ಕೇಳು ವೇಮ ಎಂಬ ಅಂಕಿತದಲ್ಲೇ ಪದ್ಯರಚನೆ ಮಾಡಿದ ಮಹಾನ್ ಪುರುಷರು ಎಂದು ತಿಳಿಸಿದರು.

ನನಗೆ ಚಿಕ್ಕವಯಸ್ಸಿನಿಂದ ರೆಡ್ಡಿ ಸಮುದಾಯದ ಜತೆ ಆತ್ಮೀಯವಾದ ಒಡನಾಟವಿದೆ. ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಸ್ನೇಹಿತರು ರೆಡ್ಡಿ ಸಮುದಾಯದವರಿದ್ದಾರೆ. ರೆಡ್ಡಿ ಎಂದರೇ ಹೆಚ್ಚು ಉದಾರತೆ ಇರುವ ಸಮುದಾಯ. ಕಷ್ಟ ಎಂದು ಹೇಳಿಕೊಂಡು ಯಾರಾದರೂ ರೆಡ್ಡಿ ಸಮುದಾಯದ ಬಳಿ ಹೋದರೆ ಅವರನ್ನು ಹಾಗೆಯೇ ಕಳಿಸುವುದಿಲ್ಲ ಆ ಸಮುದಾಯದ ಉದಾರತೆಯ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮುದಾಯಕ್ಕೆ ಉದಾರತೆ ಜೊತೆಗೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಇದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಅವರು ರಾಜವಂಶದಲ್ಲಿ ಹುಟ್ಟಿದರೂ ಕೂಡ ಸುಖವನ್ನು ತ್ಯಜಿಸಿ ಪದ್ಯಗಳ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ ಎಂದರು.

ಎರೆಹೊಸಹಳ್ಳಿ ಹರಿಹರ ದಾವಣಗೆರೆ ಜಿಲ್ಲೆಯ ರೆಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿಗಳು ಮಾತನಾಡಿ, ವೇಮನರು ಆಧ್ಯಾತ್ಮ ಸಾಹಿತ್ಯ ಸಮಾಜಕ್ಕೆ ನೀಡಿದ್ದಾರೆ. ಮನುಷ್ಯನ ದುಃಖಕ್ಕೆ ನಿವಾರಣೆ ಮಾಡಲು ಆಧ್ಯಾತ್ಮಿಕತೆ ಹುಟ್ಟಿದೆ. ರಾಜ್ಯ ಸರ್ಕಾರವು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಮಹಾಯೋಗಿ ವೇಮನ ಜಯಂತಿಗಳನ್ನು ಆಚರಿಸುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಬೆಂಗಳೂರಿನ ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷರಾದ ಎಸ್. ಜಯರಾಂ ರೆಡ್ಡಿ ಮಾತನಾಡಿ, ವೇಮನರು ರೆಡ್ಡಿ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಎಲ್ಲಾ ಸಮುದಾಯದ ವರ್ಗದವರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ರೆಡ್ಡಿ ಜನಸಂಘದ ಆಡಳಿತಾಧಿಕಾರಿ ಜೆ.ಕೆ.ಕಂಚೀವರದಯ್ಯ ಅವರು ಶ್ರೀ ಮಹಾಯೋಗಿ ವೇಮನ ಅವರ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್, ಕರ್ನಾಟಕ ರೆಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಎನ್. ಶೇಖರ್ ರೆಡ್ಡಿ ಸೇರಿದಂತೆ ಹಿರಿಯ ಗಣ್ಯರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here